ಕಾರವಾರ/ಮೈಸೂರು: ಮೈಸೂರಿನಿಂದ ಗೋಕರ್ಣಕ್ಕೆ ಪ್ರವಾಸ ಬಂದಿದ್ದ ಶಾಲಾ ಬಸ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿ, 26ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸುಳೆ ಮುರ್ಕಿ ಕ್ರಾಸ್ ಬಳಿ ಭಾನುವಾರ ಸಂಜೆ ನಡೆದಿದೆ.
ಮೈಸೂರಿನ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತಂದಿದ್ದ ಬಸ್ ಪಲ್ಟಿಯಾಗಿದೆ. ಮೈಸೂರಿನ ಪವನ್ (15) ಸ್ಥಳದಲ್ಲೇ ಮೃತಪಟ್ಟಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಜನ್ಮದಿನದಂದೇ ಬಾಲಕನ ಸಾವು: ಪವನ್ ಮೈಸೂರಿನ ಜನತನಗರದ ಆಟೋ ಚಾಲಕರೊಬ್ಬರ ಪುತ್ರನಾಗಿದ್ದು, ತಮ್ಮ ಜನ್ಮದಿನದಂದೇ ಮೃತಪಟ್ಟಿದ್ದಾರೆ. ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು (ಸೋಮವಾರ) ಮರಣೋತ್ತರ ಪರೀಕ್ಷೆ ನಡೆಯಲಿದೆ.
ಅಪಘಾತ ವಿಷಯ ತಿಳಿದ ಕೂಡಲೇ ಮೈಸೂರು ಡಿಡಿಪಿಐ ಡಿ.ಉದಯ್ ಕುಮಾರ್ ಹಾಗೂ ದಕ್ಷಿಣ ವಲಯ ಬಿಇಒ ಕೃಷ್ಣ ಅವರು ಹೊನ್ನಾವಾರ ಎಸಿ, ತಹಶೀಲ್ದಾರ್ ಹಾಗೂ ಬಿಇಒ ಜೊತೆ ಸಂಪರ್ಕ ಸಾಧಿಸಿ ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
Laxmi News 24×7