ಪ್ರತಿ ಟನ್ ಕಬ್ಬಿಗೆ ರೂ. 2,950 ದರ ನೀಡಲು ಒಪ್ಪಿಗೆ: ಹೋರಾಟ ಹಿಂಪಡೆದ ಬೀದರ್ ರೈತರು
ಬೀದರ್: ಕಬ್ಬು ದರ ನಿಗದಿ ಮಾಡುವಂತೆ ಒತ್ತಾಯಿಸಿ ಕಳೆದೊಂದು ವಾರದಿಂದ ಹೋರಾಟ ನಡೆಸುತ್ತಿದ್ದ ರೈತ ಮುಖಂಡರು ಶಾಂತಿಯುತವಾಗಿ ಇಂದು ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಜಿಲ್ಲಾಧಿಕಾರಿಚ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ರೈತ ಮುಖಂಡರ ಸಭೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ರೈತರೊಂದಿಗೆ ಮೊಬೈಲ್ ಸ್ಪೀಕರ್ನಲ್ಲಿ ಮಾತನಾಡಿ, ಕಾರ್ಖಾನೆ ಮಾಲೀಕರನ್ನು ಮನವೊಲಿಸಿ ಪ್ರತಿ ಟನ್ ಕಬ್ಬಿಗೆ ರೂ. 2850 ಕ್ಕೆ ಹೆಚ್ಚುವರಿಯಾಗಿ ರೂ. 50 ಸೇರಿಸಿ ರೂ. 2900 ನೀಡಲು ಒಪ್ಪಿಗೆ ಪಡೆಯಲಾಗಿದೆ. ಇದಕ್ಕೆ ಮಾನ್ಯ ಮುಖ್ಯಮಂತ್ರಿ ಅವರು ಈಗಾಗಲೇ ಘೋಷಿಸಿರುವ ಸರ್ಕಾರದ ರೂ. 50 ಸಹಾಯಧನ ಸೇರಿ ಒಟ್ಟಾರೆ ಪ್ರತಿ ಟನ್‌ಗೆ ರೂ. 2950 ರೈತರಿಗೆ ಲಭ್ಯವಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಇದಕ್ಕೆ ರೈತ ಮುಖಂಡರು ಒಪ್ಪಿಗೆ ಸೂಚಿಸಿ ಪ್ರತಿಭಟನೆ ಕೈಬಿಡುವುದಾಗಿ ತಿಳಿಸಿದರು. ಈ ರಾಜಿಗೆ ಒಪ್ಪಿ ಪ್ರತಿಭಟನೆ ಕೈಬಿಟ್ಟ ರೈತರಿಗೆ ಸಚಿವ ಈಶ್ವರ ಖಂಡ್ರೆ ಅವರು ಅಭಿನಂದನೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಕಳೆದ ಎಂಟು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ರೈತ ಮುಖಂಡರು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ರೈತ ಮುಖಂಡರು ಕೆಲ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಬೀದರ್ನಲ್ಲಿ ಸಕ್ಕರೆ ಸಂಶೋಧನಾ ಕೇಂದ್ರ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸಕ್ಕರೆ ರಿಕವರಿ ದರ ನಿಗದಿ ಪರಿಶೀಲನೆಗೆ ಪ್ರತಿ ಕಾರ್ಖಾನೆಗೆ ಪದವಿ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕರ ತಂಡವೊಂದನ್ನು ನೇಮಿಸಲಾಗುವುದು. ಅಲ್ಲದೇ ರೈತರು ಸಹ 15 ದಿನಕ್ಕೊಮ್ಮೆ ಕಾರ್ಖಾನೆಗೆ ಭೇಟಿ ನೀಡಿ ರಿಕವರಿಯನ್ನು ಪರಿಶೀಲಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಪ್ರವೀಣ ಬರಗಲ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
Laxmi News 24×7