Breaking News

ಧೂಳಿನಿಂದ ಹೈರಾಣಾದ ಹುಬ್ಬಳ್ಳಿ ಮಂದಿ!

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ಭಾಗಶಃ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಮತ್ತೊಂದೆಡೆ ನಿರ್ಮಾಣ ಹಂತದಲ್ಲಿರುವ ಬೃಹತ್‌ ಕಾಮಗಾರಿಗಳಿಂದ ರಸ್ತೆ ಸಂಚಾರ ಅಯೋಮಯವಾಗಿದ್ದು, ಅದರಿಂದ ಏಳುವ ಧೂಳು ಅವಳಿ ನಗರದ ಜನತೆಯನ್ನು ಹೈರಾಣು ಮಾಡಿದೆ. ತಗ್ಗು-ಗುಂಡಿ ಹಾಗೂ ಧೂಳಿನ ಕಿರಿಕಿರಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

ಓಡಾಡುವುದಕ್ಕೆ ಸಾಧ್ಯವೇ ಇಲ್ಲದಷ್ಟು ಅವಳಿ ನಗರದ ಭಾಗಶಃ ರಸ್ತೆಗಳು ಹದಗೆಟ್ಟಿದ್ದು, ಹೇಗೆ ಮತ್ತು ಎಲ್ಲಿಂದ ರಸ್ತೆಯನ್ನು ಸರಿಪಡಿಸುವುದೆಂದು ಗೊತ್ತಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಕೆಸರು ಗದ್ದೆಯಂತಾಗುವ ಇಲ್ಲಿನ ರಸ್ತೆಗಳು, ಬಿಸಿಲು ಬಿದ್ದರೆ ಧೂಳಿನ ಮಜ್ಜನವಾಗುತ್ತದೆ. ಪರಿಣಾಮ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಎದುರಿಸುಂತಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನರಿಗೆ ಕಾಡುತ್ತಿರುವ ಕಾಯಿಲೆಗಳು: ನಗರದ ಮಧ್ಯ ಭಾಗದಲ್ಲಿ ಫ್ಲೈ ಓವರ್ ಕೆಲಸ ನಡೆಯುತ್ತಿದೆ. ಪರಿಣಾಮ ಹುಬ್ಬಳ್ಳಿಯ ಹೊಸೂರು ಸರ್ಕಲ್, ಬಸವವನ, ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಕೋರ್ಟ್ ಸರ್ಕಲ್‌ಗಳ ವ್ಯಾಪ್ತಿಯ ಕೆಳ ರಸ್ತೆಗಳಲ್ಲಿ ವಾಹನಗಳು ‘ಕ್ರಾಸ್ ಕಂಟ್ರಿ ರೇಸ್’ ಮಾಡುತ್ತಿವೆ. ಕರ್ತವ್ಯದಲ್ಲಿರುವ ಪೊಲೀಸರು ವಾಹನ ಸವಾರರ ಈ ಒದ್ದಾಟವನ್ನು ಅಸಹಾಯಕತೆಯಿಂದ ನೋಡುವಂತಾಗಿದೆ. ಹೀಗೆ ಮಳೆಯಲ್ಲಿ ಗುಂಡಿಗಳ ಹಾವಳಿಯಿಂದ ತತ್ತರಿಸಿದ್ದ ಜನ, ಈಗ ಗುಡ್ಡಗಾಡು ಓಟವನ್ನು ನಿತ್ಯ ಮಾಡುವಂತಾಗಿದೆ. ಜನ ಇಷ್ಟು ಪರದಾಡುತ್ತಿದ್ದರೂ ಕಾರ್ಪೋರೇಟರ್‌ಗಳಾಗಲಿ, ಮಹಾನಗರದ ಪ್ರಥಮ ಪ್ರಜೆಯಾಗಲಿ ಕೆಟ್ಟ ರಸ್ತೆಗಳ ಬಗ್ಗೆ ಮಾತ್ರ ಎಲ್ಲಿಯೂ ಚಕಾರ ಎತ್ತುತ್ತಿಲ್ಲ.

ಮೊದಲೇ ರಸ್ತೆಗಳು ಹಾಳಾಗಿವೆ. ಈಗ ಎಲ್ಲೆಡೆ ಧೂಳು ತುಂಬಿ, ಜನರನ್ನು ಆಸ್ತಮಾ ರೋಗಿಗಳನ್ನಾಗಿಸುವ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಮೇಲ್ಸೇತುವೆ ಕಾಮಗಾರಿ ಬರುವ ಮುನ್ನವೇ ನಗರದ ವಾತಾವರಣ ಧೂಳಿನಿಂದ ಕೂಡಿತ್ತು. ಈಗ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಸಂಚಾರ ಮಾರ್ಗದಲ್ಲಿ ಬದಲಾವಣೆ ಆಗಿದೆ. ಎಲ್ಲಿ ಬೇಕೆಂದರಲ್ಲಿ ರಸ್ತೆಗಳು ಗುಂಡಿ ಬಿದ್ದು, ಸಾರ್ವಜನಿಕರಿಗೆ ಧೂಳಿನ ಮಜ್ಜನ ಖಚಿತವಾಗಿದೆ. ಧೂಳಿನ ಪ್ರಮಾಣ ಹೆಚ್ಚಾಗಿದ್ದರಿಂದ ಆಸ್ತಮಾ, ಕೆಮ್ಮು ಸೇರಿ ಇತರ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಸ್ಥಳೀಯರು ಬೇಸರ ಹೊರಹಾಕುತ್ತಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ