Breaking News

ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿಯ ಸಭೆಯಲ್ಲಿ ಸಿಎಂ ಹಾಗೂ ಸಚಿವರು.

Spread the love

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿಯ ಸಭೆಯಲ್ಲಿ ಒಟ್ಟು 27,607.26 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಕೊಡಲಾಗಿದೆ.

ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 66ನೇ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ. ಎಂ.ಸಿ.ಸುಧಾಕರ್, ಸಂತೋಷ್ ಲಾಡ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್,
ಜಿಬಿಎ ಆಯುಕ್ತರಾದ ಮಹೇಶ್ವರ ರಾವ್ ಹಾಗೂ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆ ಬಳಿಕ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಸಭೆಯಲ್ಲಿ 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ. ಒಟ್ಟು ಈ 13 ಯೋಜನೆಗಳಿಂದ 8,704 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. 11 ಹೊಸ ಹೂಡಿಕೆ ಯೋಜನೆಗಳ ಪೈಕಿ ತೇಜಸ್ ನೆಟ್ವರ್ಕ್ಸ್ 542.19 ಕೋಟಿ ರೂ, ವಾಯು ಅಸೆಟ್ಸ್ 1,251 ಕೋಟಿ ರೂ, ಜಿಂದಾಲ್ ಸ್ಟೀಲ್ಸ್ 1,300.57 ಕೋಟಿ ರೂ, ಜಿಂದಾಲ್ ಎಲೆಕ್ಟ್ರಿಕಲ್ ಸ್ಟೀಲ್ 7,102 ಕೋಟಿ ರೂ, ಗ್ರಾಸಿಂ ಇಂಡಸ್ಟ್ರೀಸ್ 1,386 ಕೋಟಿ ರೂ, ಎಸ್ಎಫ್ಎಕ್ಸ್ ಇಂಡಿಯಾ 9,298 ಕೋಟಿ ರೂ, ಸ್ನೀಡರ್ ಎಲೆಕ್ಟ್ರಿಕ್ ಐಟಿ ಬಿಝಿನೆಸ್ ಹಾಗೂ ಎಚ್ಎಸ್ಎಸ್ ಟೆಕ್ಸ್ಟೈಲ್ಸ್ 740 ಕೋಟಿ ರೂ, ಸ್ನೈಡರ್ ಎಲೆಕ್ಟ್ರಿಕ್ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,520.75 ಕೋಟಿ ರೂ, ಕ್ಯೂಪಿಐಎಐ ಇಂಡಿಯಾ 1,136 ಕೋಟಿ ರೂ, ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಲಿಮಿಟೆಡ್ 1,330 ಕೋಟಿ ರೂ, ಮತ್ತು ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ 1,622 ಕೋಟಿ ರೂ. ಹೂಡಿಕೆ ಮಾಡಲಿವೆ. ಮಿಕ್ಕಂತೆ, ಎಂಬೆಸಿ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಬಾಲಾಜಿ ವೇಫರ್ಸ್ ಕಂಪನಿಗಳು ಕ್ರಮವಾಗಿ 80 ಮತ್ತು 298.75 ಕೋಟಿ ರೂ. ಹೆಚ್ಚುವರಿ ಬಂಡವಾಳ ತೊಡಗಿಸಲಿವೆ ಎಂದು ಅವರು ಹೇಳಿದ್ದಾರೆ.

ವಿಳಂಬಕ್ಕೆ ಅವಕಾಶ ನೀಡಬಾರದು: ಕರ್ನಾಟಕವು ದೇಶದಲ್ಲೇ ಪ್ರಗತಿಪರ ರಾಜ್ಯವಾಗಿದ್ದು, ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವನ್ನು ಇನ್ನಷ್ಟು ಉತ್ತಮಪಡಿಸಬೇಕು. ಯಾವುದೇ ಕಾರಣಕ್ಕೂ ಅನುಮೋದನೆಗಳ ನೀಡಿಕೆಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು. ಈ ಕುರಿತು ಮುಖ್ಯ ಕಾರ್ಯದರ್ಶಿಯವರು ಎಲ್ಲಾ ಇಲಾಖೆಗಳಿಗೆ ಸೂಕ್ತ ನಿರ್ದೇಶನಗಳನ್ನು ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಕೈಗಾರಿಕಾ ಸ್ನೇಹಿ ವ್ಯವಸ್ಥೆಯನ್ನು ಉತ್ತಮಪಡಿಸಲು ಕಾನೂನು ಮತ್ತು ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿಗಳನ್ನು ತರುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಕೈಗಾರಿಕೆಗಳ ಆರಂಭಕ್ಕೆ ಅಗತ್ಯವಾದ ಭೂ ಬಳಕೆ ಬದಲಾವಣೆ ಪ್ರಕ್ರಿಯೆ ಸೇರಿದಂತೆ ವಿವಿಧ ಎನ್‌ಒಸಿಗಳ ನೀಡಿಕೆಯ ಕಾಲಮಿತಿಯನ್ನು ಕಡಿಮೆ ಮಾಡಬೇಕು. ಕಾಲಮಿತಿ ಕಡಿಮೆ ಮಾಡುವ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಖಡಕ್ ಸೂಚನೆ ನೀಡಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ