ಮೈಸೂರು: ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿಜೃಂಭಣೆಯ ದೀಪಾಲಂಕಾರಕ್ಕೆ ಇಂದು (ಭಾನುವಾರ) ರಾತ್ರಿ ತೆರೆ ಬೀಳುತ್ತಿದೆ. ಕಳೆದ 21 ದಿನಗಳಿಂದ ನಡೆದ ದೀಪಾಲಂಕಾರಕ್ಕೆ 300 ಕಿ.ಲೋ ವ್ಯಾಟ್ಗಳ, 2,57,520 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ಸೆ.22ರಂದು ದಸರಾ ಉದ್ಘಾಟನಾ ದಿನ ಸಯ್ಯಾಜಿರಾವ್ ರಸ್ತೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ದೀಪಾಲಂಕಾರಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಅ.12ರ ವರೆಗೆ 21 ದಿನಗಳ ಕಾಲ ಸಾಂಸ್ಕೃತಿಕ ನಗರಿ ಇಂದ್ರನ ನಗರಿಯಂತೆ ಕಂಗೊಳಿಸಿತು.
136 ಕಿ.ಮೀ. ದೀಪಾಲಂಕಾರ: ದೀಪಾಲಂಕಾರದ ಹಿನ್ನೆಲೆಯಲ್ಲಿ ಈ ಬಾರಿ 136 ಕಿ.ಮೀ. ವ್ಯಾಪ್ತಿಯ ನಗರದ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ಎಲ್ಇಡಿ ಬಲ್ಬ್ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳು ಸ್ಥಳೀಯರು ಹಾಗೂ ಪ್ರವಾಸಿಗರ ಕಣ್ಮನ ಸೆಳೆದವು. ದೀಪಾಲಂಕಾರದ ಆಕರ್ಷಣೆ ಹೆಚ್ಚಿಸಲು ಈ ಬಾರಿ ಮಾಡಲಾಗಿದ್ದ ಕೋಲ್ಕತ್ತಾ ಮಾದರಿ ಲೈಟಿಂಗ್ಸ್ ಕೂಡ ಮನಮೋಹಕವಾಗಿತ್ತು. ಬಣ್ಣ ಬಣ್ಣದ ಲೈಟ್ಗಳು ದೀಪಾಲಂಕಾರದ ಮೆರುಗನ್ನು ಇಮ್ಮಡಿಗೊಳಿಸಿದವು.
ಕಂಗೊಳಿಸಿದ ಪಾರಂಪರಿಕ ನಗರಿ: ದೀಪಾಲಂಕಾರದಿಂದ ಇಡೀ ಮೈಸೂರು ನಗರವೇ ವಿದ್ಯುತ್ ಲೈಟ್ಗಳಿಂದ ಕಂಗೊಳಿಸಿತು. ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ದೇವರಾಜ ಅರಸು ರಸ್ತೆ, ಅಗ್ರಹಾರ ರಸ್ತೆ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಬಂಡಿಪಾಳ್ಯ ಸೇರುವ ರಿಂಗ್ ರಸ್ತೆ, ಆಲನಹಳ್ಳಿ ಸೇರುವ ರಿಂಗ್ ರಸ್ತೆ ಹಾಗೂ ಪ್ರಮುಖ ಹೆದ್ದಾರಿಗಳಿಗೂ ಅಲಂಕಾರ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು.
ನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಪ್ರಮುಖ ವೃತ್ತಗಳಲ್ಲಿ ನವಿಲಿನ ಮಾದರಿ, ಸಂವಿಧಾನ ಪೀಠಿಕೆ, ಸರ್ ಎಂ. ವಿಶ್ವೇಶ್ವರಯ್ಯ, ಡಾ.ಎಪಿಜೆ ಅಬ್ದುಲ್ ಕಲಾಂ, ರಾಜವಂಶಸ್ಥರ ಭಾವಚಿತ್ರದ ಮಾದರಿಗಳು, ಅರಮನೆ, ವಿಧಾನಸೌಧ ಮಾದರಿಗಳು ಜನರನ್ನು ಹೆಚ್ಚಾಗಿ ಆಕರ್ಷಿಸಿತು. ಚಾಮರಾಜ ಒಡೆಯರ್ ವೃತ್ತ, ಜಯಚಾಮರಾಜ ಒಡೆಯರ್ ವೃತ್ತ, ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಗೌನ್‌ಹೌಸ್, ಎಲ್ಐಸಿ ವೃತ್ತ ಸೇರಿದಂತೆ ಹಲವು ವೃತ್ತಗಳಲ್ಲಿ ನಾನಾ ಆಕೃತಿಗಳಿಂದ ದೀಪಾಲಂಕಾರ ಮಾಡಲಾಗಿತ್ತು.
Laxmi News 24×7