ಮೈಸೂರು: ಸಾಂಪ್ರದಾಯಿಕ ಉಡುಗೆ ತೊಟ್ಟು ನವ ವಧುವರರಂತೆ ಕಂಗೊಳಿಸುತ್ತಿದ್ದ ಜೋಡಿಗಳು ಬೆಳ್ಳಂಬೆಳಿಗ್ಗೆ ಟಾಂಗಾ ಸವಾರಿ ಮಾಡಿ, ಇತಿಹಾಸ ಸಾರುವ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸಿದರು.
ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ರಂಗಚಾರ್ಲು ಪುರಭವನದಲ್ಲಿ ಪಾರಂಪರಿಕ ಕಟ್ಟಡ ಮತ್ತು ಇತಿಹಾಸದ ಮಾಹಿತಿ, ಪಾರಂಪರಿಕ ಉಡುಗೆಗಳನ್ನು ಪ್ರಚಲಿತಗೊಳಿಸುವುದು ಹಾಗೂ ನಶಿಸಿ ಹೋಗುತ್ತಿರುವ ಪಾರಂಪರಿಕ ಟಾಂಗಾಗಳ ಉಳಿಸುವಿಕೆ ಉದ್ದೇಶದಿಂದಾಗಿ ಟಾಂಗಾ ಸವಾರಿ ಆಯೋಜಿಸಲಾಗಿತ್ತು. ಕನ್ನಡದ ಪ್ರಸಿದ್ಧ ಸಿನಿಮಾವಾದ ಸು ಫ್ರಂ ಸೋ ಚಿತ್ರದ ನಟ ಪ್ರಕಾಶ್ ತುಮಿನಾಡು ದಂಪತಿಗಳು ಸಹ ಟಾಂಗಾ ಸವಾರಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಾರಂಪರಿಕ ಉಡುಗೆಯೊಂದಿಗೆ ಟಾಂಗಾ ಸವಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧೆಡೆಯಿಂದ ದಂಪತಿಗಳು ಆಗಮಿಸಿ, ರಾಜ್ಯದ ಸಂಸ್ಕೃತಿ ಬಿಂಬಿಸಿದರು. ಮೈಸೂರು ಪೇಟ, ಪಂಚೆ ಮತ್ತು ಶಲ್ಯದೊಂದಿಗೆ ಪುರುಷರು ಮಿಂಚುತ್ತಿದ್ದರೆ, ಇತ್ತ ರೇಷ್ಮೆ ಸೀರೆವುಟ್ಟು ಮಲ್ಲಿಗೆ ಮುಡಿದ ಮಹಿಳೆಯರು ಕಂಗೊಳಿಸುತ್ತಿದ್ದರು. ಉತ್ತರ ಕರ್ನಾಟಕ, ಕೊಡಗು, ಗೌಡರ ಶೈಲಿಯಲ್ಲಿಯೂ ಸಹ ದಂಪತಿಗಳು ತಯಾರಾಗಿ ಬಂದಿದ್ದರು. ಹೀಗೆ ಸುಮಾರು 50 ಜೋಡಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದವು.
Laxmi News 24×7