ಚಿಕ್ಕೋಡಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಅಪರಾಧಿಗೆ 10 ಲಕ್ಷ ರೂಪಾಯಿ ದಂಡದ ಜೊತೆಗೆ ಮರಣದಂಡನೆ ಶಿಕ್ಷೆ ವಿಧಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ಶೀಘ್ರಗತಿ ಪೊಕ್ಸೊ ನ್ಯಾಯಾಲಯ-1 ಇಂದು ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಅವರು ತೀರ್ಪು ನೀಡಿದ್ದಾರೆ.
ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಭರತೇಶ ಮಿರ್ಜಿ(28) ಎಂಬಾತ ಕಠಿಣ ಶಿಕ್ಷೆಗೆ ಗುರಿಯಾದ ಅಪರಾಧಿ.
2019ರ ಸೆಪ್ಟೆಂಬರ್ 10ರಂದು ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ಪ್ರಕರಣದ ವಿವರ: ಮನೆಯಿಂದ ಚಾಕಲೇಟ್ ತರಲು ಹೊರ ಹೋಗಿದ್ದ ಬಾಲಕಿ(8 ವರ್ಷ)ಯನ್ನು ಅಪರಾಧಿ ಭರತೇಶ ಮಿರ್ಜಿ ಚಾಕ್ಲೆಟ್ ಕೊಡುವುದಾಗಿ ನಂಬಿಸಿ, ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ನಂತರ ಬಾಲಕಿಯನ್ನು ಕೊಂದು, ಸೊಂಟಕ್ಕೆ ಕಲ್ಲು ಕಟ್ಟಿ ಪಕ್ಕದ ಬಾವಿಗೆ ಎಸೆದಿದ್ದ. ಈ ದುಷ್ಕೃತ್ಯ ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿತ್ತು.
ಮಗಳು ಕಾಣೆಯಾದ ಬಗ್ಗೆ ಪೋಷಕರು ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ನಂತರ ಪ್ರಕರಣದ ಆರೋಪಿ ಭರತೇಶ ಮಿರ್ಜಿ ಎಂದು ತಿಳಿದು, ಆತನನ್ನು ಬಂಧಿಸಿದ್ದರು.
ಅಂದಿನ ಎಸ್ಪಿ ಲಕ್ಷ್ಮಣ ನಿಂಬರಗಿ, ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ್ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾಗಿ ಜಿ.ಎಸ್.ಉಪ್ಪಾರ ಸೇರಿದಂತೆ ಪೊಲೀಸ್ ಸಿಬ್ಬಂದಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದೀಗ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದೆ.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಎಲ್.ವಿ.ಪಾಟೀಲ ಅವರು ವಾದ ಮಂಡಿಸಿದ್ದರು.
ಇನ್ನು, ದರೋಡೆ, ಅತ್ಯಾಚಾರ ಪ್ರಕರಣದಡಿ ಪರಿಶೀಲನೆ ಮಾಡುತ್ತಿದ್ದ ಪೊಲೀಸರ ಮೇಲೆಯೇ ಆರೋಪಿ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಆತನ ಮೇಲೆ ಪಿಎಸ್ಐ ಗುಂಡು ಹಾರಿಸಿದ ಘಟನೆ ಇತ್ತೀಚೆಗೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬೆಳಗ್ಗೆ 6 ಗಂಟೆಯ ಸುಮಾರಿಗೆ ಆರೋಪಿ ರಮೇಶ ತಿಲಾರಿ ಎಂಬವನನ್ನು ಬಂಧಿಸಲು ಹೋದಾಗ ಷರೀಫ್ ದಫೇದಾರ್ ಸೇರಿ ಮತ್ತಿಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳ ಮೇಲೆ ಆರೋಪಿ ಚಾಕು ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್ಐ ಪ್ರವೀಣ ಗಂಗೊಳ್ಳಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಆತನನ್ನು ಹೆದರಿಸಲು ಮುಂದಾಗಿದ್ದರು. ಆದರೆ, ಅದಕ್ಕೆ ಜಗ್ಗದ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದರು.
Laxmi News 24×7