ಬೆಂಗಳೂರು, (ಸೆಪ್ಟೆಂಬರ್ 8): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಮ್ಮುಖದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್ಫೋಸಿಸ್ನ ಸ್ಪ್ರಿಂಗ್ಬೋರ್ಡ್ (infosys springboard) ಸಿಎಸ್ಆರ್ ಕಾರ್ಯಕ್ರಮದಡಿ ಸಹಭಾಗಿತ್ವಕ್ಕಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯು (Karnataka Media Academy) ಪತ್ರಕರ್ತರ ತರಬೇತಿಗಾಗಿ ಒಡಂಬಡಿಕೆ ಮಾಡಿಕೊಂಡಿದೆ. ಪತ್ರಕರ್ತರ ಸಾಫ್ಟ್ಸ್ಕಿಲ್ ತರಬೇತಿಯ ಉದ್ದೇಶಕ್ಕಾಗಿ ಮಾಡಿಕೊಳ್ಳುತ್ತಿರುವ ಈ ಒಡಂಬಡಿಕೆಯು ಸಿ.ಎಸ್.ಆರ್. ಅಡಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕೈಗೆತ್ತಿಕೊಂಡ ಮೊದಲ ಕಾರ್ಯಕ್ರಮವಾಗಿದ್ದು, ಇನ್ಫೋಸಿಸ್ CSR ಯೋಜನೆಯ “ಸ್ಪ್ರಿಂಗ್ಬೋರ್ಡ್” ಪ್ಲಾಟ್ಫಾರ್ಮ್ ಮೂಲಕ ಪತ್ರಕರ್ತರ ಡಿಜಿಟಲ್ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣ ಈ ಒಡಂಬಡಿಕೆಯ ಉದ್ದೇಶವಾಗಿದೆ.
ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಭಾಗಿತ್ವವು ಬದಲಾಗುತ್ತಿರುವ ಹೊಸ ಮಾಧ್ಯಮಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ವಿನೂತನ ಪ್ಲಾಟ್ಫಾರಂ ಮಾಧ್ಯಮ ವೃತ್ತಿಪರರ ಕೌಶಲ್ಯ ಉನ್ನತೀಕರಣಕ್ಕೆ, ಅದರಲ್ಲೂ ವಿಶೇಷವಾಗಿ ಪತ್ರಕರ್ತರಿಗೆ ವೇಗವಾಗಿ ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ತಾಂತ್ರಿಕ ಪರಿಣತಿ ಹಾಗೂ ಸುದ್ದಿಯನ್ನು ಪ್ರಸ್ತುತಪಡಿಸುವ ಕೌಶಲವನ್ನು ಒದಗಿಸಲಿದೆ” ಎಂಬ ಆಶಯವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಅವರು ವ್ಯಕ್ತಪಡಿಸಿದ್ದಾರೆ.
“ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಶಿಕ್ಷಣ ಕುರಿತ ಸಿಎಸ್ಆರ್ ಕಾರ್ಯಕ್ರಮವಾಗಿದೆ. ಇಂದು ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಮಾಧ್ಯಮ ಅಕಾಡೆಮಿಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಮಾಧ್ಯಮ ಅಕಾಡೆಮಿಗೆ ಸ್ಪ್ರಿಂಗ್ಬೋರ್ಡ್ನ ಡಿಜಿಟಲ್ ವಿಷಯಗಳಿಗೆ ಪ್ರವೇಶ ಲಭಿಸಲಿದೆ ಮತ್ತು ಅವರು ಸಾಫ್ಟ್ ಸ್ಕಿಲ್ ಗಳು, ವ್ಯಕ್ತಿತ್ವ ವಿಕಾಸ ಹಾಗೂ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಇತ್ತೀಚಿನ ತಂತ್ರಜ್ಞಾನಗಳ ಅವಲೋಕನ ಕುರಿತ ವಿಷಯಗಳಿಂದ ಪ್ರಯೋಜನ ಪಡೆಯಬಹುದು. ಇದು ವಿಶೇಷವಾಗಿ 2ನೇ ಹಾಗೂ 3ನೇ ಹಂತದ ನಗರಗಳ ಪತ್ರಕರ್ತರಿಗೆ ಖಂಡಿತವಾಗಿಯೂ ಸಹಾಯಕವಾಗಲಿದೆ” ಎಂದು ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ (ಇಟಿಎ) ಸತೀಶ ಬಿ. ನಂಜಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ.
Laxmi News 24×7