ಬೆಳಗಾವಿ: 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಇಬ್ಬರು ಅಪ್ರಾಪ್ತರು ಸೇರಿ ಐವರನ್ನು ಇಲ್ಲಿನ ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ ಬೆಳಗಾವಿಯಲ್ಲಿ ದಾಖಲಾದ ಎರಡನೇ ಅತ್ಯಾಚಾರ ಪ್ರಕರಣವಿದು.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಕಿರಾತಕರು, ಬಳಿಕ ಮತ್ತೆ ಜನವರಿಯಲ್ಲಿ ಅತ್ಯಾಚಾರ ಎಸಗಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಪೋಷಕರು ನಿನ್ನೆ ಬೆಳಗ್ಗೆ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದರು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಪೊಲೀಸ್ ಆಯುಕ್ತರ ಮಾಹಿತಿ: ಪ್ರಕರಣದ ಬಗ್ಗೆ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ”ಬೆಳಗಾವಿ ಜಿಲ್ಲೆಯವರೇ ಆದ ಆರೋಪಿಗಳು 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆರು ಆರೋಪಿಗಳ ಪೈಕಿ ಒಬ್ಬ ಬಾಲಕಿಯ ಪರಿಚಯ ಮಾಡಿಕೊಂಡು, ಸ್ನೇಹ ಬೆಳೆಸಿದ್ದಾನೆ. ಬಳಿಕ ಪುಸಲಾಯಿಸಿ ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲಿ ಆರು ಮಂದಿ ಅತ್ಯಾಚಾರ ಎಸಗಿದ್ದಾರೆ. ಈ ಕೃತ್ಯ 2024ರ ಡಿಸೆಂಬರ್ ತಿಂಗಳಲ್ಲಿ ನಡೆದಿದೆ. ಅತ್ಯಾಚಾರದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ, ಮತ್ತೆ ಜನವರಿಯಲ್ಲಿ ಮೂವರು ಅತ್ಯಾಚಾರ ಮಾಡಿದ್ದಾರೆ” ಎಂದು ತಿಳಿಸಿದರು.
‘‘ನಿನ್ನೆ ಮಧ್ಯಾಹ್ನ ಪ್ರಕರಣ ದಾಖಲಾಗಿದ್ದು, 24 ಗಂಟೆಗಳಲ್ಲೇ ಎಪಿಎಂಸಿ ಪಿಐ ಮತ್ತು ಅವರ ತಂಡ ಐವರು ಆರೋಪಿಗಳನ್ನು ಬಂಧಿಸಿದೆ. ಇಬ್ಬರು ಅಪ್ರಾಪ್ತರಿದ್ದು, ಮೂವರು ವಯಸ್ಕರು. ಒಬ್ಬ ನಾಪತ್ತೆಯಾಗಿದ್ದು, ಶೀಘ್ರವೇ ಬಂಧಿಸುತ್ತೇವೆ” ಎಂದರು.
”ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 65, 70 ವಿಧಿ ಹಾಗೂ ಪೋಕ್ಸೊ ಕಾಯ್ದೆಯಡಿ ಸೆಕ್ಷನ್ 4, 6, 8 ಮತ್ತು 12ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಗರಿಷ್ಠ 20 ವರ್ಷ ಜೈಲು ಶಿಕ್ಷೆ ಆಗುತ್ತದೆ. ಆರೋಪಿಗಳನ್ನು ಕೇವಲ ಬಂಧಿಸಿ, ಪ್ರಕರಣವನ್ನು ಇಷ್ಟಕ್ಕೇ ಕೈ ಬಿಡುವುದಿಲ್ಲ. 20ಕ್ಕೂ ಅಧಿಕ ವರ್ಷ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತೇವೆ. ಆ ನಿಟ್ಟಿನಲ್ಲಿ ನಮ್ಮ ಪೊಲೀಸರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ವೈಜ್ಞಾನಿಕವಾಗಿ ತನಿಖೆ ನಡೆಸಲಿದ್ದಾರೆ. ಅದರ ಆಧಾರದ ಮೇಲೆ ಚಾರ್ಜ್ಶೀಟ್ ಸಲ್ಲಿಸುತ್ತೇವೆ. ಆದಷ್ಟು ಬೇಗ ತನಿಖೆ ಶುರು ಮಾಡುತ್ತೇವೆ” ಎಂದು ಪೊಲೀಸ್ ಕಮಿಷನರ್ ಹೇಳಿದರು.
Laxmi News 24×7