ವಿಜಯನಗರ: ಏಷ್ಯಾದ ಅತಿದೊಡ್ಡ ಕರಡಿ ಧಾಮವೆಂದು ಖ್ಯಾತಿ ಪಡೆದಿರುವ ದರೋಜಿ ಕರಡಿ ಧಾಮದ ಕಾನನದಲ್ಲಿ ಕರಡಿಗಳು ತುಂಟಾಟವಾಡಿ ನಲಿಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ತಿಂಗಳಿಂದ ಏರುತ್ತಿರುವ ಬಿಸಿಲಿನ ತಾಪದ ಬೇಗೆಯಿಂದ ಬೆಂದಿದ್ದ ವನ್ಯಮೃಗಗಳು ಮಳೆ ಬಂದ ಹಿನ್ನೆಲೆ ಹಾಗೂ ವಾತಾವರಣ ತಂಪಾದ ಕಾರಣ ಈ ರೀತಿ ಚಿನ್ನಾಟವಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿವೆ.
ಕಡುಬಿಸಿಲಿನಿಂದ ಕಾದು ಹೆಂಚಾಗಿದ್ದ ಧರೆ, ಮಳೆಯಿಂದ ಕೂಲ್ ಕೂಲ್ ಆಗಿದ್ದು, ಕರಡಿ ಧಾಮದಲ್ಲಿನ ಕರಡಿಗಳು ಕೂಡಾ ಈ ವಾತಾವರಣದಲ್ಲಿನ ಬದಲಾವಣೆಗೆ ಸಂತಸಗೊಂಡಂತಿದೆ. ಬಿಸಿಲಿನ ಕಾರಣಕ್ಕೆ ತೆರೆಮರೆಯಲ್ಲಿದ್ದ ಕರಡಿಗಳೀಗ ಹೊರಗೆ ಬಂದು ಓಡಾಡುತ್ತಿವೆ.ತಾಯಿ ಕರಡಿಯೊಂದಿಗೆ ಮರಿಕರಡಿಗಳು ಬಿಂದಾಸ್ ಆಗಿ ಓಡಾಡುತ್ತಿರುವ ದೃಶ್ಯಗಳು ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿವೆ. ದರೋಜಿ ಕರಡಿ ಧಾಮಕ್ಕೆ ನಿತ್ಯ ಬಹುಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹಂಪಿ ನೋಡಲು ಬರುವ ಪ್ರವಾಸಿಗರಿಗೆ ದರೋಜಿ ಕರಡಿ ಧಾಮ ಒಂದು ವಿಭಿನ್ನ ಅನುಭವ ಕೊಡುವುದಂತೂ ನಿಜ.
Laxmi News 24×7