ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಂಟೂರ ಗ್ರಾಮದಲ್ಲಿ 77 ವಿದ್ಯಾರ್ಥಿಗಳಿದ್ದರೂ ಪ್ರೌಢಶಾಲೆ ಇಲ್ಲ. ಪ್ರೌಢಶಿಕ್ಷಣಕ್ಕಾಗಿ ಮಕ್ಕಳು ಪಕ್ಕದ ನಿಪನಾಳ ಗ್ರಾಮಕ್ಕೆ ಅಲೆಯಬೇಕಾದ ಪರಿಸ್ಥಿತಿ ಇದೆ. ಇದು ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಗ್ರಾಮಕ್ಕೆ ಒಂದು ಪ್ರೌಢಶಾಲೆ ಮಂಜೂರು ಮಾಡುವಂತೆ ಗ್ರಾಮಸ್ಥರು ಶಾಸಕರಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಯಾರೊಬ್ಬರೂ ಕಿವಿಗೊಟ್ಟಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಮಕ್ಕಳ ಸಂಕಷ್ಟ ದೂರು ಮಾಡುವ ಕೆಲಸ ಮಾಡಿಲ್ಲ ಎಂಬುದು ಪಾಲಕರ ದೂರು.
ಮಂಟೂರಿನಲ್ಲಿ ಎರಡು ಸರ್ಕಾರಿ ಪ್ರಾಥಮಿಕ ಶಾಲೆಗಳು, ಒಂದು ಹಿರಿಯ ಪ್ರಾಥಮಿಕ ಶಾಲೆ, ಒಂದು ಖಾಸಗಿ ಪ್ರಾಥಮಿಕ ಶಾಲೆ ಇದೆ. 1ರಿಂದ 8ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಸಿಗುತ್ತಿದೆ. ಈ ವರ್ಷ 8ನೇ ತರಗತಿ ಮುಗಿಸಿದ 77 ಮಕ್ಕಳಿದ್ದಾರೆ. ಇವರಲ್ಲಿ 38 ವಿದ್ಯಾರ್ಥಿನಿಯರು, 39 ವಿದ್ಯಾರ್ಥಿಗಳು ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಲು ಪರದಾಡುವಂತಾಗಿದೆ.
ಬಾಲಕರು ಹಾಸ್ಟೆಲ್ ಅಥವಾ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಪ್ರೌಢಶಾಲೆ ಸೇರುತ್ತಿದ್ದಾರೆ. ಬಾಲಕಿಯರ ಪಾಡು ಹೇಳತೀರದು. ತಾಲ್ಲೂಕು ಕೇಂದ್ರವಾದ ರಾಯಬಾಗದಲ್ಲಿ ಮಾತ್ರ ಮಹಿಳಾ ವಸತಿ ನಿಲಯ ಇದೆ. ಅದು 25 ಕಿ.ಮೀ ದೂರ. ಅಲ್ಲಿಗೆ ಕಳುಹಿಸಲು ಪಾಲಕರು ಒಪ್ಪುತ್ತಿಲ್ಲ. ಇದರಿಂದ ಹೆಣ್ಣುಮಕ್ಕಳು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಪಾಲಕರೊಂದಿಗೆ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ಸಣ್ಣ ವಯಸ್ಸಿನಲ್ಲೇ ವೈವಾಹಿಕ ಬಂಧನಕ್ಕೆ ದೂಡಲ್ಪಟ್ಟ ಉದಾಹರಣೆಗಳೂ ಇವೆ ಎನ್ನುತ್ತಾರೆ ಶಿಕ್ಷಕರು.
ನಿಪನಾಳ ಕೂಡ 6 ಕಿ.ಮೀ ದೂರ ಇದೆ. ಸರಿಯಾದ ಸಮಯಕ್ಕೆ ಬಸ್‌ಗಳು ಇಲ್ಲ. ನಡೆದು ಹೋಗಬೇಕಾದ ಅನಿವಾರ್ಯ ಸಂದರ್ಭಗಳೂ ಬಂದಿವೆ ಎಂಬುದು ಬಾಲಕರ ಅಳಲು.
ಮಂಟೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದೇವೆ. ಎಲ್ಲ ವ್ಯವಸ್ಥೆಗಳೂ ಇವೆ. ಆದರೆ ಸರ್ಕಾರ ಮನಸ್ಸು ಮಾಡಿಲ್ಲ
-ಮಲ್ಲವ್ವ ಭೀಮಪ್ಪ ಮೇಟಿ ಸದಸ್ಯೆ ಗ್ರಾಮ ಪಂಚಾಯಿತಿ
ಬಾಲಕಿಯರ ಉನ್ನತ ಶಿಕ್ಷಣದ ಸಲುವಾಗಿ ಯಾವುದೇ ಹೋರಾಟಕ್ಕೆ ಸಿದ್ಧರಾಗಿದ್ದೇವೆ. ಈ ಶೈಕ್ಷಣಿಕ ಸಾಲಿನಲ್ಲಿ ಪ್ರೌಢಶಾಲೆ ಮಂಜೂರು ಮಾಡುವವರೆಗೆ ಹೋರಾಟ ನಿಲ್ಲದು
-ನಾಗಪ್ಪ ಮೇಟಿ ಪಾಲಕ
ಗ್ರಾಮದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದೆ. ಇದನ್ನು ಆಧರಿಸಿ ಸರ್ಕಾರಿ ಪ್ರೌಢ ಶಾಲೆ ಮಂಜೂರಾತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು
-ಆರ್.ಬಸವರಾಜಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ರಾಯಬಾಗ
ಈ ವರ್ಷ ನಾನು 8ನೇ ತರಗತಿ ಪಾಸಾಗಿದ್ದೇನೆ. ಉನ್ನತ ಶಿಕ್ಷಣ ಪಡೆಯಬೇಕು ಎಂಬ ಕನಸಿದೆ. ಬೇರೆ ಊರಿಗೆ ಕಳುಹಿಸಲು ಪಾಲಕರು ಹೆದರುತ್ತಿದ್ದಾರೆ. ನನ್ನ ಕಲಿಕೆ ಅರ್ಧಕ್ಕೆ ನಿಂತಿದೆ
-ಕಾವೇರಿ ಬೋರಗೊಡ ವಿದ್ಯಾರ್ಥಿನಿ ಮಂಟೂರ