Breaking News

ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳಕ್ಕೆ 617 ಮಹಿಳೆಯರು ಬಲಿ! ನಾಲ್ಕುವರೆ ವರ್ಷದಲ್ಲಿ 27,828 ಲೈಂಗಿಕ ದೌರ್ಜನ್ಯ

Spread the love

ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 617 ಮಹಿಳೆಯರು ವರದಕ್ಷಿಣೆ ಕಿರುಕುಳದಿಂದ ಮೃತಪಟ್ಟಿದ್ದಾರೆ. ರಾಜ್ಯ ಮಹಿಳಾ ಆಯೋಗ 2022ರಿಂದ 2026ರ ಜೂನ್​ವರೆಗೆ ರಾಜ್ಯದಲ್ಲಿ ದಾಖಲಾಗಿರುವ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ವರದಕ್ಷಿಣೆ ಕಿರುಕುಳದಿಂದ ಮಹಿಳೆಯರ ಸಾವು, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಪತಿಯ ಕ್ರೌರ್ಯದ ಪ್ರಕರಣಗಳನ್ನು ಆಯೋಗ ವರದಿಯಲ್ಲಿ ದಾಖಲಿಸಿದೆ.

617 ವರದಕ್ಷಿಣೆ ಸಾವಿನ ಪ್ರಕರಣಗಳ ಪೈಕಿ 32 ನಕಲಿ ಪ್ರಕರಣವಾಗಿದ್ದರೆ, ನಾಲ್ಕೂವರೆ ವರ್ಷದಲ್ಲಿ 7 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. 467 ಪ್ರಕರಣಗಳು ಇನ್ನೂ ವಿವಿಧ ನ್ಯಾಯಾಲಯದಲ್ಲಿವೆ. ವರದಕ್ಷಿಣೆಗಾಗಿ ಮಹಿಳೆಯರಿಗೆ ಕಿರುಕುಳ ನೀಡುವುದು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುವುದು, ಅಂತಿಮವಾಗಿ ಮಹಿಳೆಯರ ಸಾವಿಗೆ ಕಾರಣವಾಗುತ್ತಿರುವ ಪ್ರಕರಣಗಳು ನಿರಂತರವಾಗಿ ದಾಖಲಾಗುತ್ತಿವೆ. ಆದರೆ ಇಂತಹ ಗಂಭೀರ ಪ್ರಕರಣಗಳಲ್ಲಿ ನ್ಯಾಯದಾನ ವೇಗವಾಗಿ ದೊರೆಯದೇ ಇರುವುದು ಕಳವಳಕಾರಿಯಾಗಿದೆ.

ಶಿಕ್ಷೆಯ ಪ್ರಮಾಣದ ಬಗ್ಗೆ ಪ್ರಶ್ನೆ

617 ಸಾವುಗಳಿಗೆ ಸಂಬಂಧಿಸಿದ ಪ್ರಕರಣಗಳ ಪೈಕಿ ಕೇವಲ 7 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಪ್ರಕರಣಗಳ ತನಿಖೆ, ಇದು ಸಾಕ್ಷ್ಯ ಸಂಗ್ರಹ, ಸಾಕ್ಷಿಗಳ ರಕ್ಷಣೆ ಮತ್ತು ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಪ್ರಕ್ರಿಯೆಯಲ್ಲಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಪ್ರಕರಣಗಳು ವರ್ಷಗಟ್ಟಲೆ ಬಾಕಿ ಉಳಿದರೆ, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರೆಯುವ ನಿರೀಕ್ಷೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಲೈಂಗಿಕ ದೌರ್ಜನ್ಯ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು 2022ರಲ್ಲಿ 5,857 ಪ್ರಕರಣ ದಾಖಲಾಗಿವೆ. ತನಿಖೆ ವೇಳೆ 559 ನಕಲಿ ಪ್ರಕರಣ ಎಂದು ತಿಳಿದುಬಂದಿದೆ. 54 ಮಂದಿಗೆ ಶಿಕ್ಷೆಯಾಗಿದೆ. 2023ರಲ್ಲಿ 6,489 ಪ್ರಕರಣ ದಾಖಲಾಗಿದ್ದು, ಆ ಪೈಕಿ 651 ನಕಲಿ ಪ್ರಕರಣ ಪತ್ತೆಯಾಗಿವೆ. 2024ರಲ್ಲಿ 6335 ಪ್ರಕರಣ ದಾಖಲಾಗಿದ್ದರೆ, 722 ನಕಲಿ ಪ್ರಕರಣ. 2025ರಲ್ಲಿ 5843 ಪ್ರಕರಣ ದಾಖಲಾಗಿದ್ದು, 610 ನಕಲಿ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಒಟ್ಟು ನಾಲ್ಕುವರೆ ವರ್ಷದಲ್ಲಿ ಲೈಂಗಿಕ ದೌರ್ಜನ್ಯದ ಒಟ್ಟು 27,828 ಪ್ರಕರಣ ದಾಖಲಾಗಿವೆ.

ಪತಿಯ ಕ್ರೌರ್ಯ

ಪತಿಯ ಕ್ರೌರ್ಯದ ವಿರುದ್ಧ 2022ರಲ್ಲಿ 2,779 ಪ್ರಕರಣ ದಾಖಲಾಗಿವೆ. ಆ ಪೈಕಿ 2,467 ಪ್ರಕರಣಗಳು ಪತಿಯ ಕ್ರೌರ್ಯ ಸಾಬೀತಾಗಿದೆ. 2023ರಲ್ಲಿ 2,946 ಪ್ರರಕಣಗಳು ಪೈಕಿ 329 ನಕಲಿ ಪ್ರಕರಣವಾಗಿದ್ದು, 2,556 ಪ್ರಕರಣಗಳು ತನಿಖೆ ವೇಳೆ ಸತ್ಯದಿಂದ ಕೂಡಿವೆ. 2024ರಲ್ಲಿ 2,894 ಪ್ರಕರಣ ದಾಖಲಾಗಿದ್ದು, ಆ ಪೈಕಿ 2,566 ಪ್ರಕರಣಗಳು ಆರೋಪಿಗಳ ವಿರುದ್ಧ ಸಾಬೀತಾಗಿವೆ. 2025ರಲ್ಲಿ 2,744 ಪ್ರಕರಣಗಳು ದಾಖಲಾಗಿದ್ದು, 231 ನಕಲಿ ಪ್ರಕರಣಗಳಾಗಿ ಪತ್ತೆಯಾಗಿವೆ. ಪ್ರಸಕ್ತ ವರ್ಷ 2026ರ ಜೂನ್ ವರೆಗೆ 1,534 ಪ್ರಕರಗಳು ದಾಖಲಾಗಿದ್ದು ಒಟ್ಟು 12,897 ಪ್ರಕರಣಗಳು ದಾಖಲಾಗಿವೆ.

ವರದಕ್ಷಿಣೆ ನಿಷೇಧ ಕಾಯ್ದೆ

ವಿವಾಹ ಹಾಗೂ ವಿವಾಹಾನಂತರ ವರದಕ್ಷಿಣೆ ಕಾಯ್ದೆಯಡಿ 2022ರಲ್ಲಿ 2,245 ಪ್ರಕರಣ ದಾಖಲಾಗಿವೆ. 2023ರಲ್ಲಿ 2,348, 2024ರಲ್ಲಿ 1,999 ಪ್ರಕರಣ ಹಾಗೂ 2025ರಲ್ಲಿ 2,110 ಮತ್ತು 2026ರ ಜೂನ್ವರೆಗೆ 1,039 ಪ್ರಕರಣಗಳು ದಾಖಲಾಗಿವೆ.

ಅತ್ಯಾಚಾರ ಪ್ರಕರಣ

ಅತ್ಯಾಚಾರ ಪ್ರಕರಣಗಳ ಪೈಕಿ ಕಳೆದ ನಾಲ್ಕೂವರೆ ವರ್ಷದಲ್ಲಿ 2,572 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 537, 2023ರಲ್ಲಿ 600, 2024ರಲ್ಲಿ 623, 2025ರಲ್ಲಿ 550 ಹಾಗೂ 2026ರಲ್ಲಿ 262 ಪ್ರಕರಣಗಳು ದಾಖಲಾಗಿವೆ.


Spread the love

About Laxminews 24x7

Check Also

ಯಂತ್ರಕ್ಕೆ ಸಿಲುಕಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಬಾಲಕ – ಪುಟಾಣಿಯ ಸಾಹಸಕ್ಕೆ ಡಿಕೆಶಿ ಮೆಚ್ಚುಗೆ

Spread the loveಮಂಗಳೂರು: ಬಂಟ್ವಾಳದ  ನರಿಕೊಂಬು  ಗ್ರಾಮದ ಶಾಲೆಯಲ್ಲಿ ಅಡುಗೆ ಮಾಡುವಾಗ ತೆಂಗಿನ ಕಾಯಿ ತುರಿಯುವ ವಿದ್ಯುತ್ ಯಂತ್ರಕ್ಕೆ ಸಿಲುಕಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ