1.4 ಕೋಟಿ ರೂ. ವಂಚನೆ ಮಾಡಿದ್ದಾಳೆ ಎಂದು ಮಹಿಳೆ ವಿರುದ್ಧ ಗಂಭೀರ ಆರೋಪ ಹೊರಿಸಿದ್ದ ವೈದ್ಯನೊಬ್ಬ, ಪೊಲೀಸರಿಗೆ ದೂರು ಕೊಟ್ಟ ಬಳಿಕವೂ ಕಟ್ಟಡದಿಂದ ಜಿಗಿದು ದುರಂತ ಅಂತ್ಯ ಕಂಡ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪಶುವೈದ್ಯ ಡಾ. ಪರಮಾತ್ಮ ಸಿಂಗ್ (52) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಪರಮಾತ್ಮ ಸಾವಿಗೆ ಶರಣಾಗುವ ಮೊದಲು ಒಂದು ಡೆತ್ನೋಟ್ ಅನ್ನು ಬರೆದಿಟ್ಟು, ಬೆಳಗ್ಗೆ ತಿಂಡಿ ಮಾಡಿದ ಬಳಿಕ ಕಟ್ಟಡದಿಂದ ಜಿಗಿದಿರುವುದು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ ಎಂದು ವಿವರಿಸಲಾಗಿದೆ.
ಇನ್ನು, ಡೆತ್ನೋಟ್ನಲ್ಲಿ ಗರಿಮಾ ಸಿಂಗ್ ಎಂಬ ಮಹಿಳೆ ಮತ್ತು ಆಕೆಯ ತಂದೆ ಧ್ರುವ್ ನಾರಾಯಣ್ ಸಿಂಗ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಮನೆಯೊಂದರ ಸಾಲವನ್ನು ಮನ್ನಾ ಮಾಡಿಸುವುದಾಗಿ ಹೇಳಿ, ತನಗೆ ಬರೋಬ್ಬರಿ 1.4 ಕೋಟಿ ರೂ. ಹಣವನ್ನು ವಂಚಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಒಂದು ವಾರದ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿ ಉಲ್ಲೇಖಿಸಿದೆ.
ವೈದ್ಯನ ದೂರಿನಲ್ಲಿ ಏನಿದೆ?
ಮನೆ ಸಾಲ ಮನ್ನಾ ಮಾಡಿಸುವ ನೆಪದಲ್ಲಿ ಗರಿಮಾ ಸಿಂಗ್ ಎಂಬಾಕೆ, ನನ್ನಿಂದ ಕೆಲವು ಬಹುಮುಖ್ಯ ದಾಖಲೆಗಳನ್ನು ಪಡೆದುಕೊಂಡಿದ್ದಳು. ಬಳಿಕ ಅದೇ ದಾಖಲೆಗಳನ್ನು ಬಳಸಿಕೊಂಡು ಆರು ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡಿದ್ದಾಳೆ. ಸಾಲದ ಕಂತುಗಳು ಪಾವತಿ ಆಗದಿದ್ದಾಗ, ಬ್ಯಾಂಕ್‌ಗಳಿಂದ ಲೋನ್ ಮರುಪಾವತಿಗೆ ಸಂಬಂಧಿಸಿದಂತೆ ನಿರಂತರವಾಗಿ ಫೋನ್ ಕರೆಗಳು ಬರುತ್ತಿದ್ದವು. ಆಕೆ ನನಗೆ 1.4 ಕೋಟಿ ರೂ. ವಂಚಿಸಿದ್ದಾಳೆ ಎಂದು ಪರಮಾತ್ಮ ಸಿಂಗ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಆತ್ಮಹತ್ಯೆ ಬಳಿಕ ಅರೆಸ್ಟ್!
ಪ್ರಕರಣಕ್ಕೆ ಸಂಬಂಧಿಸಿದಂತೆ ಗರಿಮಾ ಸಿಂಗ್ ಮತ್ತು ಅವರ ತಂದೆ ಧ್ರುವ್ ನಾರಾಯಣ್ ಸಿಂಗ್ರನ್ನು ಪೊಲೀಸರು ಪರಮಾತ್ಮ ಆತ್ಮಹತ್ಯೆಯ ಬಳಿಕ ಬಂಧಿಸಿದ್ದು, ಇಬ್ಬರೂ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಘಟನೆ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ,
Laxmi News 24×7