ಬಾಗಲಕೋಟೆ : ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಸಾಧಿಸುವ ಜೀವನ ವಿಧಾನವಾಗಿದೆ. ಇಂದಿನ ವೇಗದ ಜೀವನದಲ್ಲಿ ಯೋಗವು ಒತ್ತಡವನ್ನು ಕಡಿಮೆ ಮಾಡಿ, ಆರೋಗ್ಯಕರ ಹಾಗೂ ಸಂತೋಷದ ಬದುಕಿಗೆ ದಾರಿ ತೋರಿಸುತ್ತದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮೈದಾನದಲ್ಲಿ ವಿವಿಧ ಮಹಾವಿದ್ಯಾಲಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹನ್ನೆರಡನೇಯ ಯೋಗದಿನದಲ್ಲಿ ಪಾಲ್ಗೊಂಡು ಮಾತನಾಡಿ ಅವರು ಆರೋಗ್ಯಕರ ವಯೋವೃದ್ಧಿಗಾಗಿ ಯೋಗ ಈ ವರ್ಷದ ಧ್ಯೇಯವಾಕ್ಯ ಅದರಂತೆ ನಾವು ಪ್ರತಿದಿನ ಕೆಲವೇ ನಿಮಿಷಗಳಾದರೂ ಯೋಗಕ್ಕೆ ಮೀಸಲಿಟ್ಟರೆ, ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು. ಯೋಗದ ಸಂದೇಶವಾದ ಆರೋಗ್ಯ, ಶಾಂತಿ ಮತ್ತು ಸಾಮರಸ್ಯವನ್ನು ಎಲ್ಲೆಡೆ ಹರಡಬೇಕು.ಯೋಗವು ಭಾರತದ ಪ್ರಾಚೀನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದೆ.ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ, ಮನಸ್ಸು ಶಾಂತವಾಗುತ್ತದೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರೂ ಯೋಗದ ಪ್ರಯೋಜನವನ್ನು ಪಡೆಯಿರಿ ಎಂದರು.
ಗಮನ ಸೇಳೆದ ಆಸನಗಳು
ದೇಹದ ಸಮತೋಲನ ಮತ್ತು ಭಂಗಿಯನ್ನು ಸುಧಾರಿಸುವ ತಾಡಾಸನ,ಏಕಾಗ್ರತೆ ಮತ್ತು ಸಮತೋಲನ ಹೆಚ್ಚಿಸುವ ವೃಕ್ಷಾಸನ,ದೇಹದ ನಮ್ಯತೆಯನ್ನು ಹೆಚ್ಚಿಸುವ ತ್ರಿಕೋಣಾಸನ,ಧ್ಯಾನ ಮತ್ತು ಮನಸ್ಸಿನ ಶಾಂತಿಗೆ ಸಹಕಾರಿಯ ಪದ್ಮಾಸನ, ಜೀರ್ಣಕ್ರಿಯೆಗೆ ಸಹಕಾರಿಯಾಗುವ ವಜ್ರಾಸನ ಸೇರಿದಂತೆ ಸೇತುಭಂದಾಸನ ಸುಖಾಸನ,ಭುಜಂಗಾಸನ,ಶಲಭಾಸನ,ಧನುರಾಸನ,ಪವನಮುಕ್ತಾಸನ,ಸರ್ವಾಂಗಾಸನ,ಹಲಾಸನ,ಶವಾಸನ,ಮಕರಾಸನದ ಭಂಗಿಗಳು ಗಮನ ಸೆಳೆದವು.
ಯೋಗದಿನಾಚಾರಣೆಯಲ್ಲಿ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಬಾವಿ, ಮಲ್ಲಿಕಾರ್ಜುನ ಸಾಸನೂರ ಸೇರಿದಂತೆ ಸಂಘದ ಸದಸ್ಯರು, ವಿವಿಧ ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳಿದ್ದರು.
Laxmi News 24×7