ಯಾದಗಿರಿ(ಜೂ.25): ಜಿಲ್ಲಾ ಪಂಚಾಯ್ತಿ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ್ ಮೇಲೆ ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಕೂಗಳತೆ ದೂರದಲ್ಲೇ ನಡೆದಿದೆ.
ಚಿತ್ತಾಪೂರ ರಸ್ತೆತಲ್ಲಿರುವ ಬುದ್ಧ ಬಸವ ನಗರದಲ್ಲಿ ಈ ಘಟನೆ ಜರುಗಿದ್ದು, ಗಂಭೀರ ಗಾಯಗೊಂಡ ಮರಿಲಿಂಗಪ್ಪ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರಪುರ ಶಾಸಕ ಬಿಜೆಪಿಯ ನರಸಿಂಹನಾಯಕ್ (ರಾಜೂಗೌಡ) ಅವರ ಕಟ್ಟಾಬೆಂಬಲಿಗ ಪಡೆಯಲ್ಲಿ ಮರಿಲಿಂಗಪ್ಪ ಗುರುತಿಸಿಕೊಂಡವರು.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕರ್ನಾಳ ಗ್ರಾಮದ ನಿವಾಸಿ ಮರಿಲಿಂಗಪ್ಪ ಅವರು ಖಾನಾಪುರ್ ಎಸ್.ಎಚ್. ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಮರಿಲಿಂಗಪ್ಪನ ಮೇಲೆ ಈ ಹಿಂದೆ ಕೂಡ ಚುನಾವಣೆ ಹಾಗೂ ಮರಳು ವಿಷಯದ ಮೇಲೆ ಹಲ್ಲೆ ಕೂಡ ನಡೆಸಲಾಗಿತ್ತು. ಯಾದಗಿರಿ ನಗರದ ವಿಶ್ವರಾಧ್ಯ ನಗರದಲ್ಲಿ ಮರಿಲಿಂಗಪ್ಪ ವಾಸವಾಗಿದ್ದಾರೆ.
ಯಾದಗಿರಿ: KSRTC ಬಸ್ ಚಾಲಕ, ಶುಶ್ರೂಷಕಿ ಪತ್ನಿಗೂ ಕೊರೋನಾ ಸೋಂಕು ದೃಢ
ಬುದ್ಧ ಬಸವ ನಗರದಲ್ಲಿರುವ ಪ್ರಥಮ ದರ್ಜೆ ಗುತ್ತಿಗೆದಾರ ಹನುಮೇಗೌಡ ಬೀರನಕಲ್ ನಿವಾಸಕ್ಕೆ ತೆರಳಿ, ದ್ವಿಚಕ್ರ ವಾಹನದಲ್ಲಿ ವಾಪಸ್ಸಾಗುವ ವೇಳೆ, ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿ ಬಂದ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಘಟನೆ ಸ್ಥಳಕ್ಕೆ ಎಸ್ಪಿ ಋುಷಿಕೇಶ ಭಗವಾನ್ ಸೋನವಣೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗಾಯಗೊಂಡ ಮರಿಲಿಂಗಪ್ಪ ಹಲ್ಲೆ ಮಾಡಿದವರ ಹೆಸರು ಪೊಲೀಸರಿಗೆ ನೀಡಿದ್ದಾರೆ ಎನ್ನಲಾಗಿದೆ. ಹಳೇ ದ್ವೇಷದ ಹಿನ್ನೆಲೆ ಹಲ್ಲೆ ನಡೆಸಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.