ಮಂಡ್ಯ: ಪತ್ನಿಯ ಶೀಲ ಶಂಕಿಸಿ ಪತಿಯೇ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆಲಗೂಡು ಗ್ರಾಮದಲ್ಲಿ ಜರುಗಿದೆ.
ರಶ್ಮಿ ಕೊಲೆಯಾದ ದುರ್ದೈವಿ ಮಹಿಳೆ. ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಪತಿ ರಮೇಶ್ ಈ ಕೃತ್ಯ ಎಸಗಿದ್ದಾನೆ. ಆಲಗೂಡು ಗ್ರಾಮದ ನಿವಾಸಿಯಾದ ರಮೇಶ್, ಕಳೆದ ಕೆಲವು ಸಮಯದಿಂದ ಪತ್ನಿ ರಶ್ಮಿ ಅವರ ನಡತೆಯ ಮೇಲೆ ಸಂಶಯ ಪಡುತ್ತಿದ್ದ ಎನ್ನಲಾಗಿದೆ. ಇದೇ ವಿಷಯವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು.
ಘಟನೆ ನಡೆದ ನಿನ್ನೆ ರಾತ್ರಿ ಜಗಳ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ರಮೇಶ್ ಕಬ್ಬಿಣದ ರಾಡಿನಿಂದ ರಶ್ಮಿ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ರಶ್ಮಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಬಳಿಕ ಆರೋಪಿ ರಮೇಶ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಪ್ರಸ್ತುತ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಈ ಕೊಲೆಗೆ ಸಂಬಂಧಿಸಿದಂತೆ ಮಂಡ್ಯದ ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ರಮೇಶನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Laxmi News 24×7