Breaking News

ಶಾಸಕ ವಿಠ್ಠಲ ಹಲಗೇಕರಗೆ ಗ್ರಾಮಸ್ಥರ ಘೇರಾವ್; ರಸ್ತೆ ಅಭಿವೃದ್ಧಿಗೆ ಆಗ್ರಹ

Spread the love

ಬೆಳಗಾವಿ: ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ನೂತನ ಸರ್ಕಾರಿ ಪ್ರೌಢಶಾಲೆ ಸ್ಥಾಪನೆ ವಿಚಾರವಾಗಿ ಗ್ರಾಮಸ್ಥರು ಶಾಸಕ ವಿಠ್ಠಲ ಹಲಗೇಕರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಗ್ರಾಮಕ್ಕೆ ಭೇಟಿ ನೀಡಿದ ಶಾಸಕರನ್ನು ಯುವಕರು ಹಾಗೂ ಗ್ರಾಮಸ್ಥರು ಸುತ್ತುವರಿದು, ಗ್ರಾಮದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಪ್ರಶ್ನಿಸಿದರು. ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿ ನಡೆಯದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಕಳೆದ ಜುಲೈ 27ರಂದು ಗ್ರಾಮದ ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸಾವಿರಾರು ಯುವಕರು ಇಟಗಿ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ನಡೆಸಿದ್ದರು. ಆದರೆ, ಅಂದು ಶಾಸಕರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿರಲಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಕಳೆದ ಮೂರು ವರ್ಷಗಳಿಂದ ಗ್ರಾಮದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ಇಟಗಿ ಗ್ರಾಮದಲ್ಲಿ ನೂತನ ಸರ್ಕಾರಿ ಪ್ರೌಢಶಾಲೆ ಸ್ಥಾಪಿಸುವ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ. ಶಾಲೆ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಮಕ್ಕಳ ಭವಿಷ್ಯದ ವಿಚಾರದಲ್ಲಿ ರಾಜಕೀಯ ಮಾಡದೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮದ ರಸ್ತೆ ಸಮಸ್ಯೆ ಹಾಗೂ ಇತರ ಮೂಲಸೌಕರ್ಯಗಳ ಕುರಿತು ಯುವಕರು ಶಾಸಕರನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ವಾಗ್ವಾದದ ವಾತಾವರಣ ನಿರ್ಮಾಣವಾಯಿತು. ಬಳಿಕ ಶಾಸಕ ವಿಠ್ಠಲ ಹಲಗೇಕರ ಹಾಗೂ ಅವರ ಬೆಂಬಲಿಗರು ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ರಸ್ತೆ ಅಭಿವೃದ್ಧಿ ಯಾವಾಗ? ಶಾಲೆ ಸ್ಥಾಪನೆಗೆ ಮುಕ್ತಿ ಯಾವಾಗ?

ಗ್ರಾಮದಲ್ಲಿ ಪೂಜೆ ಹಾಗೂ ಇತರ ಕಾರ್ಯಕ್ರಮಗಳಿಗೆ ನೀಡುವ ಆದ್ಯತೆಯಷ್ಟೇ ಅಭಿವೃದ್ಧಿ ಕಾರ್ಯಗಳಿಗೂ ಮಹತ್ವ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಇಟಗಿ ಗ್ರಾಮದ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದರ ಜತೆಗೆ ಸರ್ಕಾರಿ ಪ್ರೌಢಶಾಲೆ ಸ್ಥಾಪನೆಗೆ ಸಂಬಂಧಿಸಿದ ಗೊಂದಲ ನಿವಾರಿಸಿ, ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಸ್ಥರ ಈ ಬೇಡಿಕೆಗಳಿಗೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.


Spread the love

About Laxminews 24x7

Check Also

ಶಿವಮೊಗ್ಗ ದಸರಾದಲ್ಲಿ ಅಂಬಾರಿ ಆನೆ ರಂಪಾಟ – ಅಧಿಕಾರಿಗಳಿಗೆ ಕ್ಲೀನ್‌ಚಿಟ್

Spread the loveಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ  ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ರಂಪಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕ್ಲೀನ್‌ಚಿಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ