Breaking News

ಕೇಂದ್ರ ಸಚಿವೆ ಹೆಸರಲ್ಲಿ ಗಾಳ: ಹೂಡಿಕೆ ಹೆಸರಲ್ಲಿ ವೃದ್ಧನಿಗೆ ಲಕ್ಷಾಂತರ ರೂ. ವಂಚನೆ!

Spread the love

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರನ್ನು ದುರುಪಯೋಗಪಡಿಸಿಕೊಂಡು ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಹಿರಿಯ ನಾಗರಿಕನನ್ನು ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ನಗರದ ವಂಟಮುರಿ ಕಾಲನಿಯ ನಿವಾಸಿ ಪ್ರಕಾಶ ಗುಬ್ಬಿ (76) ವಂಚನೆಗೆ ಒಳಗಾದವರು. ಕೊಲ್ಲಾಪುರ ಮೂಲದ ಆದರ್ಶ ಹಾಗೂ ಮಹಾರಾಷ್ಟ್ರದ ಬುಲ್ದಾಣಾ ಮೂಲದ ದಾಮೋದರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸಚಿವೆ ಹೆಸರಿನಲ್ಲಿ ಆಕರ್ಷಕ ಜಾಹೀರಾತು ಪ್ರದರ್ಶಿಸಿ “ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭಾರೀ ಲಾಭ ಪಡೆಯಿರಿ” ಎಂದು ಜಾಹೀರಾತಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ತಮ್ಮ ಹೆಸರು ಹಾಗೂ ಸಂಪರ್ಕ ವಿವರಗಳನ್ನು ನೋಂದಾಯಿಸಿಕೊಂಡ ಬಳಿಕ, ಆರೋಪಿಗಳು ದೂರವಾಣಿ ಮೂಲಕ ಸಂಪರ್ಕಿಸಿಕೊಂಡಿದ್ದಾರೆ.
ಪ್ರಾರಂಭದಲ್ಲಿ “ನಿಮ್ಮ ಖಾತೆ ಸಕ್ರಿಯಗೊಳಿಸಲು” ಎಂಬ ನೆಪದಲ್ಲಿ ಫೋನ್ ಪೇ ಮೂಲಕ 16,500 ರೂ. ಪಾವತಿಸಿಕೊಳ್ಳಲಾಗಿದೆ. ನಂತರ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಕೆ ಮೂಡಿಸಿ ಹಂತ ಹಂತವಾಗಿ ಇನ್ನಷ್ಟು ಹಣ ಹೂಡಿಕೆ ಮಾಡಲು ಒತ್ತಾಯಿಸಿದ್ದಾರೆ. ಈ ಮಾತುಗಳನ್ನು ನಂಬಿದ ಪ್ರಕಾಶ ಗುಬ್ಬಿ ಅವರು ವಿವಿಧ ಹಂತಗಳಲ್ಲಿ ಆರ್‌ಟಿಜಿಎಸ್ ಮೂಲಕ ಒಟ್ಟು 7.39 ಲಕ್ಷ ರೂ. ಹಣವನ್ನು ಆರೋಪಿಗಳ ಖಾತೆಗೆ ಜಮೆ ಮಾಡಿದ್ದಾರೆ.
ಆದರೆ, ಹಣ ಹೂಡಿಕೆ ಮಾಡಿದ ನಂತರ ಯಾವುದೇ ಲಾಭ ನೀಡದೇ, ಹೂಡಿಕೆಯ ವಿವರಗಳನ್ನು ಕೂಡ ಸ್ಪಷ್ಟಪಡಿಸದೆ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಬಳಿಕ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಇನ್ನಷ್ಟು ಹಣ ಹೂಡಿಕೆ ಮಾಡಿದರೆ ಮಾತ್ರ ಲಾಭ ಹಾಗೂ ಮೊತ್ತ ಮರಳಿ ಸಿಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾವು ವಂಚನೆಗೆ ಒಳಗಾದಿರುವುದು ಸ್ಪಷ್ಟವಾದ ನಂತರ ಪ್ರಕಾಶ ಗುಬ್ಬಿ ಅನಗರ ಸೈಬರ್ ಅಪರಾಧ ಠಾಣೆಗೆ ದೂರು ನೀಡಿ ನ್ಯಾಯ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿ, ಬ್ಯಾಂಕ್ ವಹಿವಾಟು ಹಾಗೂ ಮೊಬೈಲ್ ಸಂಪರ್ಕಗಳ ಆಧಾರದಲ್ಲಿ ತನಿಖೆ ಮುಂದುವರೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಖ್ಯಾತ ವ್ಯಕ್ತಿಗಳ ಹೆಸರು ಹಾಗೂ ಸರ್ಕಾರಿ ಹುದ್ದೆಗಳನ್ನು ದುರುಪಯೋಗಪಡಿಸಿಕೊಂಡು ಆನ್‌ಲೈನ್ ಮೂಲಕ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಸಾರ್ವಜನಿಕರು ಇಂಥ ಆಕರ್ಷಕ ಜಾಹೀರಾತುಗಳಿಗೆ ಮರುಳಾಗದೇ ಜಾಗ್ರತೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ GTTC ಡಿಪ್ಲೋಮಾ ಪ್ರವೇಶಕ್ಕೆ ಮೇ 10 ಕೊನೆಯ ದಿನ

Spread the loveತಾಂತ್ರಿಕ ಶಿಕ್ಷಣದ ಸುವರ್ಣ ಅವಕಾಶ ಬಳಸಿಕೊಳ್ಳಲು ಪ್ರಾಚಾರ್ಯ ಯಲ್ಲಪ್ಪ ಸವದತ್ತಿ ಕರೆ ಜಿಟಿಟಿಸಿ ಡಿಪ್ಲೋಮಾ ಪ್ರವೇಶಕ್ಕೆ ಮುಹೂರ್ತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ