ಉಡುಪಿ: ಸೀಲ್‍ಡೌನ್, ಕಂಟೈನ್ಮೆಂಟ್ ಝೋನ್ ಅನ್ನು ರದ್ದು ಮಾಡಿ, ಇನ್ನು ಮುಂದೆ ಕೊರೊನಾ ಸೋಂಕಿತನ ಮನೆ ಮಾತ್ರ ಸೀಲ್ ಡೌನ್ ಮಾಡುವ ಪ್ಲಾನ್ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಜಿಲ್ಲಾಮಟ್ಟದ ಸಭೆಯ ನಂತರ ಮಾತನಾಡಿದ ಅವರು, ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಅವಧಿ 7 ದಿನಕ್ಕೆ ಮೊಟಕು ಮಾಡಲಾಗಿದೆ. ಸಾವಿರಾರು ಜನರನ್ನು ಕ್ವಾರಂಟೈನ್ ಮಾಡುವುದು ಕಷ್ಟ. ಕಂಟೈನ್ಮೆಂಟ್ ಝೋನ್‍ನ ವಿವರಣೆ ಬದಲಾಗಿದೆ ಎಂದರು.
ಉಡುಪಿಯ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ರಘುಪತಿ ಭಟ್ ಈ ಸಲಹೆ ನೀಡಿದ್ದಾರೆ. ಸೋಂಕಿತನ ಮನೆಯ ಬೀದಿಯನ್ನು ಕಂಟೈನ್ಮೆಂಟ್ ಝೋನ್ ಮಾಡುತ್ತಿದ್ದೇವೆ. ಜೊತೆಗೆ ಸೋಂಕಿತನ ಮನೆಯನ್ನು ಮಾತ್ರ ಸೀಲ್ ಮಾಡುವ ಪ್ರಸ್ತಾವ ಇದೆ. ಉಡುಪಿಯ ಸಭೆಯಲ್ಲಿ ಶಾಸಕರು ಈ ಬಗ್ಗೆ ಒತ್ತಾಯಿಸಿದ್ದಾರೆ. ಈ ಅಭಿಪ್ರಾಯ ಪ್ರಕಟಿಸಿದ್ದಾರೆ ಎಂದರು.
ಕ್ವಾರಂಟೈನ್‍ನಲ್ಲಿ ಜನರ ಬೇಡಿಕೆ ಬಹಳ ಇರುತ್ತದೆ. ಅಷ್ಟು ದೊಡ್ಡ ಸಂಖ್ಯೆಯ ಜನರನ್ನು ಸಂಭಾಳಿಸೋದು ಕಷ್ಟ. ಸೀಲ್ ಆದ ಮನೆಗೆ ಅಗತ್ಯ ವಸ್ತುಗಳನ್ನು ಸರ್ಕಾರವೇ ಒದಗಿಸುತ್ತದೆ. ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಶೀಘ್ರ ಈ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಡಾ. ಸುಧಾಕರ್ ಹೇಳಿದರು.