Breaking News

ಚಾಕು ಇರಿದು ಪ್ರೇಯಸಿಯ ಹತ್ಯೆಗೈದು ರೈಲಿಗೆ ತಲೆಕೊಟ್ಟ ಟೆಕ್ಕಿ

Spread the love

ರಾಯ್ಪುರ: ಸಾಫ್ಟ್‌ವೇರ್ ಎಂಜಿನಿಯರ್  ಒಬ್ಬ ತನ್ನ ಪ್ರಿಯತಮೆಯನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದು ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ  ನಡೆದಿದೆ.

ಮೃತರನ್ನು ಛತ್ತೀಸ್‌ಗಢದ  ಭಿಲಾಯಿ ಮೂಲದ ಶ್ರೇಷ್ಠ್ ಮಲಿಕ್ (25) ಹಾಗೂ ಉತ್ತರ ಪ್ರದೇಶದ ಸೀತಾಪುರ ಮೂಲದ ಇಶಾರಾ ಆಯೂಬಿ (25) ಎಂದು ಗುರುತಿಸಲಾಗಿದೆ. ಇಬ್ಬರೂ ಗುರುಗ್ರಾಮದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು.

ಇಶಾರಾ ಅವರ ಕುಟುಂಬದವರು ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸದ ಹಿನ್ನೆಲೆ ಅನುಮಾನಗೊಂಡಿದ್ದರು. ಬಳಿಕ ಅವರು ಕೆಲಸದ ಸ್ಥಳದಲ್ಲಿ ವಿಚಾರಿಸಿದಾಗ ಇಶಾರಾ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂಬುದು ತಿಳಿದುಬಂದಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ದೂರಿನ ಮೇರೆಗೆ ಪೊಲೀಸರು ಇಶಾರಾ ಅವರ ಮೊಬೈಲ್ ಫೋನ್‌ನ ಲೊಕೇಶನ್ ಟ್ರ‍್ಯಾಕ್ ಮಾಡಿದಾಗ, ಅದು ಗುರುಗ್ರಾಮದ ಸೆಕ್ಟರ್-55ರಲ್ಲಿರುವ ಶ್ರೇಷ್ಠ್ ಮಲಿಕ್ ಬಾಡಿಗೆಗೆ ಪಡೆದಿದ್ದ ಪಿಜಿ ಕೊಠಡಿಯನ್ನು ತೋರಿಸಿತು. ಸ್ಥಳಕ್ಕೆ ತೆರಳಿದ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ, ಇಶಾರಾ ಮೃತದೇಹ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿತ್ತು.

ಪ್ರಾಥಮಿಕ ತನಿಖೆಯಲ್ಲಿ ಇಶಾರಾ ಅವರ ಕುತ್ತಿಗೆ ಭಾಗಕ್ಕೆ ತೀಕ್ಷ್ಣವಾದ ಆಯುಧದಿಂದ ಹಲವು ಬಾರಿ ಇರಿದಿರುವುದು ಬೆಳಕಿಗೆ ಬಂದಿದೆ. ಕೊಠಡಿಯಿಂದ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಗರ್ಹಿ ರೈಲು ನಿಲ್ದಾಣದ ಸಮೀಪ ರೈಲಿನ ಮುಂದೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಸ್ಥಳಕ್ಕೆ ತೆರಳಿದ ಪೊಲೀಸರು ರೈಲು ಹಳಿಯಲ್ಲಿ ಸೊಂಟದಿಂದ ಎರಡು ತುಂಡಾಗಿದ್ದ ಮೃತದೇಹವನ್ನು ವಶಕ್ಕೆ ಪಡೆದರು.

ನಂತರ ತನಿಖೆಯಲ್ಲಿ ರೈಲಿನಡಿ ಬಿದ್ದು ಮೃತಪಟ್ಟ ವ್ಯಕ್ತಿಯೇ ಶ್ರೇಷ್ಠ್ ಮಲಿಕ್ ಎಂಬುದು ದೃಢಪಟ್ಟಿದೆ. ಈ ಎರಡೂ ಘಟನೆಗಳ ನಡುವೆ ಸಂಬಂಧವಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಘಟನೆ ನಡೆಯುವುದಕ್ಕೂ ಕೇವಲ ಮೂರು ದಿನಗಳ ಹಿಂದಷ್ಟೇ ಇಶಾರಾ ಆಯೂಬಿ ಶ್ರೇಷ್ಠ್ ಮಲಿಕ್ ವಾಸಿಸುತ್ತಿದ್ದ ಪಿಜಿ ಕೊಠಡಿಗೆ ಬಂದು ವಾಸವಾಗಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸೆಕ್ಟರ್-56 ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಮಾತನಾಡಿ, ಇಬ್ಬರ ನಡುವಿನ ಸಂಬಂಧದ ಸ್ವರೂಪ ಏನು? ಈ ಕೃತ್ಯಕ್ಕೆ ನಿಖರ ಕಾರಣವೇನು ಎಂಬುದು ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಇಬ್ಬರ ಮೊಬೈಲ್ ಫೋನ್, ಕರೆ ವಿವರಗಳು, ಚಾಟ್‌ಗಳು ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.

ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವಿಧಿವಿಜ್ಞಾನ ತಜ್ಞರ ತಂಡವು ಘಟನೆ ನಡೆದ ಸ್ಥಳಗಳಿಂದ ಅಗತ್ಯ ಮಾದರಿಗಳನ್ನು ಸಂಗ್ರಹಿಸಿದೆ. ತನಿಖೆಯ ಬಳಿಕವೇ ಘಟನೆಯ ಹಿಂದಿನ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಪೋಕ್ಸೋ ಪ್ರಕರಣ – ವಚನಾನಂದ ಸ್ವಾಮೀಜಿಗೆ ಜಾಮೀನು ಮಂಜೂರು

Spread the loveದಾವಣಗೆರೆ: ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ  ಪೋಕ್ಸೋ ಪ್ರಕರಣದಲ್ಲಿ ( POCSO case) ವಿಶೇಷ ನ್ಯಾಯಾಲಯ ಜಾಮೀನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ