ಬೆಂಗಳೂರು: ನಮ್ಮ ದೇಶದ ವಿದೇಶಾಂಗ ನೀತಿಯನ್ನು ಪ್ರಧಾನಿ ಮೋದಿ ( ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಡವಿಟ್ಟು ಬಂದಿದ್ದಾರೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ( ಕಿಡಿಕಾರಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವೆ ಹಾರ್ಮುಜ್ ಜಲಸಂಧಿ ವಿಚಾರವಾಗಿ ಮತ್ತೆ ಯುದ್ಧದ ವಾತಾವರಣ ಸೃಷ್ಟಿಯಾಗಿರುವ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕುರಿತು ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ದೇಶದಲ್ಲಿ ವಿದೇಶಾಂಗ ಸಚಿವರು ಇದ್ದಾರೋ ಇಲ್ಲವೋ? ಅಸಲು ನಮಗೊಂದು ವಿದೇಶಾಂಗ ನೀತಿ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಕಳೆದ ಬಾರಿ ಅಮೆರಿಕ-ಇರಾನ್ (USA-Iran) ಸಂಘರ್ಷದ ವೇಳೆ ಭಾರತ ಎಷ್ಟು ತೊಂದರೆ ಅನುಭವಿಸಿತು ಎಂಬುದು ಎಲ್ಲರಿಗೂ ಗೊತ್ತಿದೆ. ಆಗಿನ ಸಚಿವರು ಜನರನ್ನು ದಾರಿ ತಪ್ಪಿಸಿದ್ದರು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 100 ಡಾಲರ್ ಇದ್ದಾಗ ಇಲ್ಲಿ ಇಂಧನ ಬೆಲೆ ಏರಿಸಿದವರು, ಅದು 40 ಡಾಲರ್ಗೆ ಕುಸಿದಾಗ ಬೆಲೆ ಇಳಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸಗಳನ್ನು ಲೇವಡಿ ಮಾಡಿದ ಸಚಿವರು, ಪ್ರಧಾನ ಮಂತ್ರಿಗಳು ವಿದೇಶಕ್ಕೆ ಹೋಗುವುದು ರೀಲ್ಸ್ ಮಾಡೋಕಾ ಅಥವಾ ದೇಶದ ನೀತಿ ರೂಪಿಸೋಕಾ? ಇಷ್ಟೊಂದು ದೇಶ ಸುತ್ತಿದ್ದರೂ, ಸಾಲು ಸಾಲು ಜಾಗತಿಕ ಪ್ರಶಸ್ತಿಗಳು ಬಂದಿದ್ದರೂ ಅದರಿಂದ ಸಾಮಾನ್ಯ ಭಾರತೀಯರಿಗೆ ಆದ ಲಾಭವಾದರೂ ಏನು? ಮೋದಿಯವರ ವಿದೇಶಿ ಪ್ರವಾಸಗಳು ಕೇವಲ ಅದಾನಿ-ಅಂಬಾನಿ ಉದ್ಯಮವನ್ನು ವೃದ್ಧಿಸಲು ನೆರವಾಗುತ್ತಿವೆಯೇ ಹೊರತು ದೇಶದ ಜನರಿಗಲ್ಲ. ಈ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದು ದೂರಿದರು.
ಕೆಪಿಎಸ್ಸಿ ಶುದ್ಧೀಕರಣವಾಗಬೇಕು
ಯಾವುದೇ ಅಧಿಕಾರಿ ಅಥವಾ ಸಾಂಸ್ಥಿಕ ಮುಖ್ಯಸ್ಥರ ಮೇಲೆ ಅನುಮಾನಗಳು ವ್ಯಕ್ತವಾದಾಗ, ಅವರೇ ಸ್ವಪ್ರೇರಣೆಯಿಂದ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ತನಿಖೆಯಲ್ಲಿ ದೋಷಮುಕ್ತರಾಗಿ ಹೊರಬಂದ ನಂತರ ಮತ್ತೆ ಮುಂದುವರೆಯಬಹುದು. ಕೆಪಿಎಸ್ಸಿಯ (KPSC) ಎಲ್ಲಾ ಸದಸ್ಯರನ್ನು ವಜಾ ಮಾಡಬೇಕು ಎಂಬ ಒತ್ತಾಯ ಕೇಳಿಬಂದಾಗಲೂ, ಅಧ್ಯಕ್ಷರು ಮಾತ್ರ ತಾವೇ ಹುದ್ದೆಯಲ್ಲಿ ಮುಂದುವರೆಯುವುದಾಗಿ ಹಠ ಹಿಡಿದಿದ್ದು ಸರಿಯಲ್ಲ. ಈಗ ನಿಯಮಾವಳಿಗಳ ಪ್ರಕಾರವೇ ರಾಜ್ಯಪಾಲರು ಅವರನ್ನು ಅಮಾನತು ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕೆಪಿಎಸ್ಸಿ ಶುದ್ಧೀಕರಣದ ಕುರಿತು ಸದನದಲ್ಲಿ ಈಗಾಗಲೇ ಮೂರು ದಿನಗಳ ಕಾಲ ಸುದೀರ್ಘ ಚರ್ಚೆ ನಡೆದಿದೆ. ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಇದನ್ನೇ ಬಯಸುತ್ತಿವೆ. ಈ ಸಂಸ್ಥೆಯಲ್ಲಿ ವ್ಯವಸ್ಥಿತ ಬದಲಾವಣೆ ತರಲು ಸಂವಿಧಾನಾತ್ಮಕ ತಿದ್ದುಪಡಿಗಾಗಿ ಕೇಂದ್ರಕ್ಕೆ ಜಂಟಿ ಮನವಿ ಸಲ್ಲಿಸಬೇಕೇ ಅಥವಾ ರಾಜ್ಯ ಸರ್ಕಾರದ ಮಟ್ಟದಲ್ಲೇ ಏನಾದರೂ ಕ್ರಮ ಕೈಗೊಳ್ಳಬಹುದೇ ಎಂಬುದನ್ನು ಕಾನೂನಿನ ಸಾಧಕ-ಬಾಧಕಗಳನ್ನು ಪರಿಶೀಲಿಸಿ ನಿರ್ಧರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
Laxmi News 24×7