ಬೆಂಗಳೂರು (ಏ. 18): ಮಾರ್ಚ್ ತಿಂಗಳ ಮಧ್ಯಂತರದಲ್ಲಿ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಂದಾಗಿ ದೇಶದ ಕೊರೋನಾ ಸೋಂಕಿತರ ಪ್ರಮಾಣ ದ್ವಿಗುಣಗೊಂಡಿದೆ. ಕರ್ನಾಟಕದಿಂದಲೂ ಸಾಕಷ್ಟು ಮಂದಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಅವರಲ್ಲಿ ಇನ್ನೂ 485 ತಬ್ಲಿಘಿಗಳ ಮಾಹಿತಿ ನಿಗೂಢವಾಗಿದೆ.
ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ವಿದೇಶೀಯರು ಕೂಡ ಪಾಲ್ಗೊಂಡಿದ್ದರು. ಕರ್ನಾಟಕದಲ್ಲೂ ಬೆಳಗಾವಿ, ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಿಂದ ಆ ಸಭೆಗೆ ತೆರಳಿದ್ದರು. ಈಗಾಗಲೇ ಆ ಸಭೆಯಲ್ಲಿ ಪಾಲ್ಗೊಂಡಿದ್ದ ಸಾಕಷ್ಟು ತಬ್ಲಿಘಿಗಳಿಗೆ ಕೊರೋನಾ ವೈರಸ್ ಪತ್ತೆಯಾಗಿರುವುದರಿಂದ ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆಹಚ್ಚಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಆದರೆ, ಇನ್ನೂ 485 ತಬ್ಲಿಘಿಗಳು ತಲೆಮರೆಸಿಕೊಂಡಿದ್ದಾರೆ.
ದೆಹಲಿ ಧಾರ್ಮಿಕ ಸಭೆಯ ಬಳಿಕ ನಾಪತ್ತೆಯಾಗಿರುವ ರಾಜ್ಯದ ಆ 485 ತಬ್ಲಿಘಿಗಳ ಸುಳಿವು ಇನ್ನೂ ನಿಗೂಢವಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ತಬ್ಲಿಘಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. 485 ತಬ್ಲಿಘಿಗಳ ಮೇಲೆ ಪತ್ತೆಗಾಗಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅವರಿಗೆ ಸೋಂಕು ತಗುಲಿದ್ದರೆ ಬೇರೆಯವರಿಗೂ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆದಷ್ಟು ಬೇಗ ಅವರನ್ನು ಪತ್ತೆಹಚ್ಚಲು ಕಾರ್ಯೋನ್ಮುಖರಾಗಿದ್ದಾರೆ. ರಾಜ್ಯದಿಂದ ದೆಹಲಿಯ ಧಾರ್ಮಿಕ ಸಭೆಗೆ ಹೋಗಿ ಬಂದವರಲ್ಲಿ 47 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೆಹಲಿ ಸಭೆಗೆ ತೆರಳಿದ್ದವರ ಮಾಹಿತಿ ಸಿಕ್ಕರೆ ತಿಳಿಸುವಂತೆ ಹಾಗೂ ಆ ಸಭೆಯಲ್ಲಿ ಪಾಲ್ಗೊಂಡಿದ್ದವರು ಸ್ವತಃ ಆಸ್ಪತ್ರೆಗೆ ದಾಖಲಾಗುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಸದ್ಯಕ್ಕೆ ಆ 485 ತಬ್ಲಿಘಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ, ಪೊಲೀಸರು 485 ತಬ್ಲಿಘಿಗಳ ಕುಟುಂಬದ ಮೇಲೆ ನಿಗಾ ಇಟ್ಟಿದ್ದಾರೆ. ಅವರು ತಮ್ಮ ಕುಟುಂಬದವರನ್ನು ಸಂಪರ್ಕಿಸುವ ಸಾಧ್ಯತೆ ಇರುವುದರಿಂದ ತೀವ್ರ ನಿಗಾ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳಿಂದ ನಿಗಾ ವಹಿಸಲಾಗಿದೆ. ಆದರೂ ಅವರು ಇನ್ನೂ ಯಾರ ಸಂಪರ್ಕಕ್ಕೂ ಬಂದಿಲ್ಲ.