ಕೋಲಾರ: ಡಿ.ಕೆ ಶಿವಕುಮಾರ್ ಆಸ್ಕರ್ ಪ್ರಶಸ್ತಿಗೆ ಯೋಗ್ಯರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಮತ್ತೆ ವಾಕ್ಸಮರ ಶುರುವಾಗಿದೆ. ಸ್ಟಿಂಗ್ ಆಪರೇಷನ್ ಹೆಸರಲ್ಲಿ ರಾಜಕೀಯ ನಾಟಕ ನಡೆಯುತ್ತಿದೆ, ಈ ನಾಟಕಕ್ಕೆ ಪ್ರಶಸ್ತಿ ನೀಡುವುದಾದರೆ ಮುಖ್ಯಮಂತ್ರಿ ಅವರಿಗೆ ದೇಶದ ಎಲ್ಲಾ ಪ್ರಶಸ್ತಿಗಳನ್ನು ಮೀರಿಸುವ ಶ್ರೇಷ್ಠ ಪ್ರಶಸ್ತಿ ನೀಡಬೇಕು. ಇನ್ನು ಡಿ.ಕೆ.ಶಿವಕುಮಾರ್ ಅವರು ಆಸ್ಕರ್ ಪ್ರಶಸ್ತಿಗೆ ಯೋಗ್ಯರು ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಬರ ಹಾಗೂ ಕೆಪಿಎಸ್‌ಸಿ ಸೇರಿದಂತೆ ಗಂಭೀರ ಪ್ರಕರಣಗಳಿಂದ ಜನರ ಗಮನ ಬೇರೆಡೆ ಸೆಳೆಯಲು ರಾಜಕೀಯ ನಾಟಕ ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳ ಮೇಲೆ ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದರು ಎನ್ನುವವರು, ಇದುವರೆಗೆ ಯಾಕೆ ಎಫ್‌ಐಆರ್ ದಾಖಲಿಸಿಲ್ಲ? ಪೊಲೀಸ್ ಠಾಣೆಯಲ್ಲಿ ದೂರು ಏಕೆ ನೀಡಿಲ್ಲ? ದೂರುದಾರರು ಮುಖ್ಯಮಂತ್ರಿಗಳೇ ಆಗಿರುವುದರಿಂದ ದೂರು ದಾಖಲಾಗಿಲ್ಲವೇ ಎಂದು ಪ್ರಶ್ನಿಸಿದರು.
ತಮ್ಮ ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳುವ ಮುಖ್ಯಮಂತ್ರಿ, ಸಾಕ್ಷ್ಯ ಸಿಗದಂತೆ ಕೆಲಸ ಮಾಡಿ ಎಂದೂ ಸೂಚಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಮಹನೀಯರು ಆಳಿದ ರಾಜ್ಯದಲ್ಲಿ ಭ್ರಷ್ಟಾಚಾರದ ಪಾಠ ಹೇಳುವವರು ಬೇಕಿತ್ತೇ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ವ್ಯವಸ್ಥೆ ಸರಿಯಿಲ್ಲ ಅನ್ನೋದಾದ್ರೆ ರಾಜೀನಾಮೆ ಕೊಟ್ಟು ಪ್ರತಿಭಟನೆ ಮಾಡಿ. ಈ ಹಿಂದೆ ಚುನಾವಣೆಗಳು ಬೇರೆ ರೀತಿಯಲ್ಲಿದ್ದವು. ಆದರೆ, ಈಗ ಶಾಂತಿಯುತವಾಗಿ ಚುನಾವಣೆಗಳು ನಡೆಯುತ್ತಿವೆ. ಚುನಾವಣಾ ಆಯೋಗದ ಆಯುಕ್ತರ ರಾಜೀನಾಮೆ ಅನ್ನೋದು ರಾಜಕೀಯ ಪ್ರಹಸನ ಅಷ್ಟೆ, ಸುಳ್ಳನ್ನೆ ಮನೆ ದೇವರು ಮಾಡಿಕೊಂಡಿರುವವರು ಏನು ಮಾಡುತ್ತಾರೆ ಎಂದು ಟಾಂಗ್ ನೀಡಿದರು.
Laxmi News 24×7