ಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಅವರ ನಡುವಿನ ಮುನಿಸು 2ನೇ ಹಂತಕ್ಕೆ ತಲುಪಿದಂತಿದೆ. ಸಿದ್ದರಾಮಯ್ಯ ಅವರಿಗೆ ಆಹ್ವಾನ ಇಲ್ಲದೇ ಮಹದೇವಪ್ಪ ಅವರು ಮೈಸೂರಿನಲ್ಲಿ ʻರಾಷ್ಟ್ರೀಯ ಸಂವಿಧಾನ ದಿನʼ ಕಾರ್ಯಕ್ರಮ ಆಯೋಜನೆ ಮಾಡಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.
ನವೆಂಬರ್ 26, 27 ರಂದು ಮೈಸೂರಿನಲ್ಲಿ ಸಂವಿಧಾನದ ಹೆಸರಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಸಮ್ಮೇಳನವನ್ನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನ ಮಾಜಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರ ನೇತೃತ್ವದಲ್ಲಿ ಆಯೋಜನೆಗೊಳ್ಳುತ್ತಿದೆ. ಅಲ್ಲದೇ ಸಿದ್ದರಾಮಯ್ಯ ಅವರನ್ನ ಆಹ್ವಾನಿಸಲ್ವಾ? ಅನ್ನೋ ಪ್ರಶ್ನೆಗೂ ಮಹದೇವಪ್ಪ ಅವರು ಸ್ಪಷ್ಟ ಉತ್ತರ ನೀಡದಿರುವುದು ಇಬ್ಬರ ನಡುವಿನ ಮುನಿಸು ಮುಂದಿನ ಹಂತ ತಲುಪಿದೆಯಾ ಅನ್ನೋ ಪ್ರಶ್ನೆ ಮೂಡಿಸಿದೆ.
ಸಿದ್ದರಾಮಯ್ಯ ಅವರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲ್ವಾ ಅನ್ನೋ ಪ್ರಶ್ನೆಗೆ ಹೆಸರು ಹೇಳದೇ ಖಡಕ್ ಉತ್ತರ ಕೊಟ್ಟ ಮಹದೇವಪ್ಪ, ಇಲ್ಲಿ ಯಾವ ವ್ಯಕ್ತಿಯ ಪ್ರಶ್ನೆಯೂ ಇರಲ್ಲ. ಸಂವಿಧಾನದ ರಕ್ಷಕರು ಎಲ್ಲಾ ಸೇರಿ ಇದರಲ್ಲಿ ಭಾಗವಹಿಸುತ್ತಾರೆ ಎಂದಷ್ಟೇ ಹೇಳಿದ್ದಾರೆ.
ಇನ್ನೂ ತಮ್ಮ ಹಾಗೂ ಸಿದ್ದರಾಮಯ್ಯ ನಡುವಿನ ಫ್ರೆಂಡ್ಶಿಪ್ ಕುರಿತ ಪ್ರಶ್ನೆಗೂ ಉತ್ತರ ಕೊಡದೇ ನುಣುಚಿಕೊಂಡ ಮಾಜಿ ಸಚಿವರು, ONCE A FRIEND IS ALWAYS A FRIEND, ಸ್ನೇಹದ ಪ್ರೀತಿ ಜಾಸ್ತಿಯೂ ಆಗಲ್ಲ, ಕಡಿಮೆಯೂ ಆಗಲ್ಲ. ನಾನು ಈಗ ಬೇರೆ ಯಾವ ಪ್ರಶ್ನೆಗಳಿಗೂ ಈಗ ಉತ್ತರ ಕೊಡಲ್ಲ. ಬೇರೆ ಯಾವುದೇ ವಿಷಯವನ್ನ ಇಲ್ಲಿ ತರೋದು ಬೇಡ, ಮುಕ್ತ ಮನಸ್ಸಿನಿಂದ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಲ್ಲರೂ ಪಾಲ್ಗೊಳ್ಳಿ ಎಂದು ಹೇಳಿ, ಜಾರಿಕೊಂಡಿದ್ದಾರೆ.
Laxmi News 24×7