Home / ಜಿಲ್ಲೆ / ಮಂಗಳೂರು ಗಲಭೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು” ಸಿದ್ದರಾಮಯ್ಯ

ಮಂಗಳೂರು ಗಲಭೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು” ಸಿದ್ದರಾಮಯ್ಯ

Spread the love

ಬೆಂಗಳೂರು, ಫೆ.19- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರು ಪ್ರತಿಭಟನೆಯಲ್ಲಿ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿರುವ ಪ್ರಕರಣ ವಿಧಾನಸಭೆಯಲ್ಲಿಂದು ಗಂಭೀರ ಚರ್ಚೆಗೆ ಒಳಗಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಂಗಿಕುಸ್ತಿಗೆ ಕಾರಣವಾಯಿತು. ಇಂದು ಬೆಳಗ್ಗೆ ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಿಯಮ 69ರ ಅಡಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತಂತೆ ಚರ್ಚೆ ಮಾಡಲು ಅವಕಾಶ ಕಲ್ಪಿಸಿದರು.

ಚರ್ಚೆ ಆರಂಭಿಸಿದ ಸಿದ್ದರಾಮಯ್ಯ ಅವರು, ಮಂಗಳೂರು ಗಲಭೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಜನ ಸಾಮಾನ್ಯರ ಮೇಲ ಪೊಲೀಸರು ನಿಯಮ ಬಾಹಿರವಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ನಿಷೇಧಾಜ್ಞೆ ಜಾರಿಗೊಳಿಸಿದ್ದು ಅಕ್ರಮ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮಂಗಳೂರಿನಲ್ಲಿ ಶೇ.99.5ರಷ್ಟು ಮಂದಿ ಶಾಂತಿ ಪ್ರಿಯರಿದ್ದಾರೆ ಎಂದು ಹೇಳುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಶಾಂತಿಪ್ರಿಯರ ನಾಡಿನಲ್ಲಿ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದವರ್ಯಾರು ಎಂದು ಪ್ರಶ್ನಿಸಿದರು.

ಯು.ಟಿ.ಖಾದರ್ ಅವರು ಬೆಂಕಿ ಹಚ್ಚುತ್ತೇನೆ ಎಂದು ಹೇಳಲಿಲ್ಲ. ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಹೇಳಿಕೆಗಳಲ್ಲಿ ವ್ಯಾತ್ಯಾಸಗಳಿವೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ದೇಶ ಪ್ರೇಮದ ಬಗ್ಗೆ ಪ್ರಸ್ತಾಪವಾದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಅವರು ದೇಶ ಪ್ರೇಮದ ಬಗ್ಗೆ ನಿಮ್ಮಿಂದ ಪಾಠ ಕಲಿಯಬೇಕಿಲ್ಲ. ಸರ್ಟಿಫಿಕೇಟ್ ಬೇಕಿಲ್ಲ ಎಂದು ಕಿಡಿಕಾರಿದರು.

ಚರ್ಚೆಯ ಪ್ರತಿ ಹಂತದಲ್ಲೂ ಮಾತಿನ ಚಕಮಕಿ, ಕಾವೇರಿದ ವಾತಾವರಣಗಳು ನಿರ್ಮಾಣಗೊಳ್ಳುತ್ತಿದ್ದವು.ಈ ಸಂದರ್ಭದಲ್ಲಿ ಕಲಾಪವನ್ನು ನಿಯಂತ್ರಣಕ್ಕೆ ತರಲು ಸಭಾಧ್ಯಕ್ಷರು ಸಾಕಷ್ಟು ಪ್ರಯತ್ನಪಟ್ಟರು. ಮಾತು ಮುಂದುವರಿಸಿದ ಸಿದ್ದರಾಮಯ್ಯ ಅವರು, ನ್ಯಾಯಮೂರ್ತಿ ಗೋಪಾಲ್‍ಗೌಡ, ಹಿರಿಯ ವಕೀಲ ಬಿ.ಟಿ.ವೆಂಟೇಶ್, ಹಿರಿಯ ಪತ್ರಕರ್ತ ಸುಗತಶ್ರೀನಿವಾಸ್ ಅವರುಗಳನ್ನೊಳಗೊಂಡ ಪೀಪಲ್ ಟ್ರಿಬಿನಲ್ ಸಮಿತಿ ಸಾರ್ವಜನಿಕರ ಆಹವಾಲು ಕೇಳಿ ವರದಿ ಕೇಳಿದೆ. ಅದರಲ್ಲೂ ಕೂಡ ಗಲಭೆ ನಿಯಂತ್ರಿಸಲು ಪೊಲೀಸರು ವಿಫಲವಾಗಿರುವುದು, ನಿಯಮ ಬಾಹಿರವಾಗಿ ನಡೆದಿಕೊಂಡಿರುವುದು ಸ್ಪಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿಸಚಿವ ಸುರೇಶ್‍ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿ, ಯಾವುದೇ ಸರ್ಕಾರವಿದ್ದರೂ ಪೊಲೀಸರು ತಮ್ಮ ಕೆಲಸವನ್ನು ತಾವು ಮಾಡುತ್ತಾರೆ. ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ನಿಟ್ಟಿನಲ್ಲಿ ನಾವು ಚರ್ಚೆ ಮಾಡಬಾರದು. ಹವಾ ನಿಯಂತ್ರಿತ ಕೊಠಡಿಯಲ್ಲಿ ಕುರಿತು ಮಾತನಾಡುವುದು ಸುಲಭ. ಆದರೆ, ಸ್ಥಳದಲ್ಲಿದ್ದು ಪರಿಸ್ಥಿತಿ ಎದುರಿಸುವುದು ಕಷ್ಟ ಎಂದರು.

ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸರು ಯಾವುದೇ ಲೋಪ ಮಾಡಿಲ್ಲ. ಸಮರ್ಥವಾಗಿ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು. ದಿನೇಶ್‍ಗುಂಡೂರಾವ್ ಅವರು ಮಂಗಳೂರು ಗಲಭೆಯಲ್ಲಿ ಸಾವನ್ನಪ್ಪಿದವರು ಅಮಾಯಕರು ಎಂದಾಗ ಬಿಜೆಪಿಯ ಹಿರಿಯ ಶಾಸಕ ಅರವಿಂದ ಲಿಂಬಾವಳಿ ವಿರೋಧ ವ್ಯಕ್ತಪಡಿಸಿ ಆ ಪದವನ್ನು ಕಡತದಿಂದ ತೆಗೆಯಬೇಕೆಂದು ಒತ್ತಾಯಿಸಿದರು.ಕಾಂಗ್ರೆಸಿಗರ ಆರೋಪಗಳಿಗೆ ಬಿಜೆಪಿ ಸದಸ್ಯರು ಪದೇ ಪದೇ ತಿರುಗೇಟು ಕೊಡುವ ಮೂಲಕ ವಾಗ್ದಾಳಿ ನಡೆಸುತ್ತಿದ್ದರು ಹೀಗಾಗಿ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗುತ್ತಿತ್ತು.

ನಿಷೇಧಾಜ್ಞೆ ಜಾರಿ ಮತ್ತು ಮಂಗಳೂರು ಗಲಭೆಯ ಆರೋಪಿಗಳಿಗೆ ಜಾಮೀನು ವಿಷಯದಲ್ಲಿ ಹೈಕೋರ್ಟ್ ನ್ಯಾಯಾಧೀಶರು ವ್ಯಕ್ತಪಡಿಸಿದ ಅಭಿಪ್ರಾಯಗಳು ಗಂಭೀರ ಚರ್ಚೆಗೆ ಒಳಪಟ್ಟವು. ಕಾಂಗ್ರೆಸ್ ಸದಸ್ಯರು ಹೈಕೋರ್ಟ್ ಅಭಿಪ್ರಾಯ ಸರ್ಕಾರಕ್ಕೆ ಆದ ಛೀಮಾರಿ ಎಂದು ವ್ಯಾಖ್ಯಾನಿಸಿದರೆ, ಅದನ್ನು ಬಿಜೆಪಿ ಸದಸ್ಯರು ತಳ್ಳಿ ಹಾಕಿ ಜಾಮೀನಿನ ವಿಚಾರಣೆ ವೇಳೆ ವ್ಯಕ್ತವಾಗುವ ಅಭಿಪ್ರಾಯಗಳು ಛೀಮಾರಿ ಅಲ್ಲ ಎಂದು ಸಮರ್ಥಿಸಿಕೊಂಡರು.

ಒಂದು ಹಂತದಲ್ಲಿ ಸಚಿವ ಮಾಧುಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ನಡುವೆ ಮಾತಿನ ಚಕಮಕಿ ನಡೆಯಿತು. ಕಾನೂನಿನ ಪಾಠವನ್ನು ನಿಮ್ಮಿಂದ ಕಲಿಯಬೇಕಿಲ್ಲ ಎಂದು ಪರಸ್ಪರ ಕೂಗಾಡಿಕೊಂಡರು.ಸಿದ್ದರಾಮಯ್ಯ ಅವರು ಮಂಗಳೂರು ಗೋಲಿಬಾರ್ ಘಟನೆ ಸರ್ಕಾರಿ ಪ್ರಾಯೋಜಿತ ಪೊಲೀಸಿನವರ ಕುಕೃತ್ಯ ಎಂದು ಗಂಭೀರ ಆರೋಪ ಮಾಡಿದಾಗ ಸಚಿವ ಮಾಧುಸ್ವಾಮಿ ಕ್ರಿಯಾಲೋಪ ವೆತ್ತುವ ಮೂಲಕ ವಿರೋಧ ವ್ಯಕ್ತಪಡಿಸಿದರು.

ಹೈಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣವನ್ನು ಉಲ್ಲೇಖಿಸಿ ಚರ್ಚೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿರೋಧ ಪಕ್ಷದ ಪರವಾಗಿ ಶಾಸಕರಾದ ರಮೇಶ್‍ಕುಮಾರ್, ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಜಮೀರ್ ಅಹಮ್ಮದ್‍ಖಾನ್, ಪ್ರಿಯಾಂಕ್ ಖರ್ಗೆ, ದಿನೇಶ್‍ಗುಂಡೂರಾವ್ ಅವರುಗಳು ಸರ್ಕಾರದ ವಿರುದ್ಧ ಕಿಡಿಕಾರಿದರೆ. ಬಿಜೆಪಿ ಪಾಳಯದಿಂದ ಸಚಿವರಾದ ಮಾಧುಸ್ವಾಮಿ, ಸುರೇಶ್‍ಕುಮಾರ್, ಬಸವರಾಜ ಬೊಮ್ಮಾಯಿ, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಸುನಿಲ್‍ಕುಮಾರ್, ಅರವಿಂದಲ ಲಿಂಬಾವಳಿ ಮತ್ತಿತರರು ಸಮರ್ಥನೆಗಿಳಿದರು.

ಮಂಗಳೂರು ಗಲಭೆ ಪ್ರಕರಣ ಚರ್ಚೆಯ ಪ್ರತಿ ಹಂತದಲ್ಲೂ ಕೋಲಾಹಲದ ವಾತಾವರಣವನ್ನೇ ನಿರ್ಮಿಸುತ್ತಿತ್ತು.ಮಾಜಿ ಸಚಿವ ಯು.ಟಿ.ಖಾದರ್ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸಿರುವುದನ್ನು ವಿರೋಧ ಪಕ್ಷ ಪ್ರಶ್ನಿಸಿ ಕಟು ಟೀಕೆ ಮಾಡಿತು.ಗೋಲುಬಾರ್ ಘಟನೆಯಲ್ಲಿ ಸತ್ತವರು ಎಂದಾದರೆ ಅದರ ಹೊಣೆ ಯಾರು ಹೊರುತ್ತಾರೆ ಎಂದು ವಿಪಕ್ಷಗಳು ಪ್ರಶ್ನಿಸಿವೆ.
ಗಲಭೆ ಮಾಡಿದವರು ಅಮಾಯಕರಲ್ಲ. ಮುಖಕಕ್ಕೆ ಬಟ್ಟೆ ಕಟ್ಟಿಕೊಂಡು ಪೊಲೀಸರತ್ತ ಕಲ್ಲು ಮತ್ತು ಪೆಟ್ರೋಲ್ ಬಾಂಬ್ ಎಸೆದವರು ಅಮಾಯಕರಲ್ಲ ಎಂದು ಬಿಜೆಪಿ ಸದಸ್ಯರು ಪ್ರತಿ ವಾದ ಮಂಡಿಸಿದರು.ಗಲಾಟೆ ತೀವ್ರಗೊಂಡು ಒಂದು ಹಂತದಲ್ಲಿ ಸದನವನ್ನು ಕೆಲ ಕಾಲ ಮುಂದೂಡುವ ಪ್ರಸಂಗವೂ ಎದುರಾಯಿತು


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ