ರಾಜ್ಯ ಸಚಿವ ಸಂಪುಟದಲ್ಲಿ ಎಸ್ಟಿ ಸಮುದಾಯಕ್ಕೆ ಮತ್ತಷ್ಟು ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಸಮುದಾಯಕ್ಕೆ ಹೆಚ್ಚುವರಿಯಾಗಿ ಇನ್ನೂ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ನಮ್ಮ ಎಸ್ಟಿ ಸಮುದಾಯದಿಂದ ಮೂವರು ಸಚಿವರಿದ್ದರು. ಆದ್ದರಿಂದ ಈಗ ಕನಿಷ್ಠ ಪಕ್ಷ ಮತ್ತೆರಡು ಖಾತೆಗಳನ್ನು ನಮ್ಮ ಸಮುದಾಯಕ್ಕೆ ನೀಡಬೇಕಿದೆ. ಇದೇನು ನಾವು ಹೊಸದಾಗಿ ಇಡುತ್ತಿರುವ ಹೆಚ್ಚುವರಿ ಬೇಡಿಕೆಯಲ್ಲ, ಈ ಹಿಂದೆ ಇದ್ದ ಹಳೆಯ ಪ್ರಾತಿನಿಧ್ಯವನ್ನೇ ಮುಂದುವರಿಸಿಕೊಂಡು ಹೋಗುವಂತೆ ಕೇಳುತ್ತಿದ್ದೇವಷ್ಟೇ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ರೆಸಾರ್ಟ್ ರಾಜಕೀಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಸಭೆಯನ್ನು ಕೇವಲ ಶಾಸಕರಿಗೆ ತರಬೇತಿ ನೀಡುವ ಉದ್ದೇಶದಿಂದ ಕರೆಯಲಾಗಿದೆ. ಮುಂಬರುವ ಚುನಾವಣೆಯ ಮತದಾನದ ಪ್ರಕ್ರಿಯೆಯಲ್ಲಿ ಶಾಸಕರಿಂದ ಯಾವುದೇ ಸಣ್ಣ ತಪ್ಪುಗಳೂ ಆಗಬಾರದು. ಇದಕ್ಕಾಗಿ ಸರಿಯಾದ ಅಭ್ಯಾಸದ ಅಗತ್ಯವಿರುತ್ತದೆ” ಎಂದರು.
ಮತದಾನದ ಜಾಗರೂಕತೆಯ ಬಗ್ಗೆ ವಿವರಿಸಿದ ಸತೀಶ್ ಜಾರಕಿಹೊಳಿ, “ಚುನಾವಣೆಯಲ್ಲಿ ಕೇವಲ ಎರಡು ಅಥವಾ ಮೂರು ಮತಗಳು ವ್ಯತ್ಯಾಸವಾದರೂ ಅಭ್ಯರ್ಥಿ ಸೋಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸೂಕ್ತ ರಾಜಕೀಯ ಕಾರ್ಯತಂತ್ರ ರೂಪಿಸಲು ಶಾಸಕರನ್ನು ಒಟ್ಟಿಗೆ ಕರೆದುಕೊಂಡು ಹೋಗಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದರು.
Laxmi News 24×7