ಚಿಕ್ಕೋಡಿ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‍ಗೆ ಇಡೀ ಭಾರತ ಲಾಕ್‍ಡೌನ್ ಆಗಿದೆ. ಆದರೆ ಅಮವಾಸ್ಯೆಗೆ ಚಿಕ್ಕೋಡಿ ತಾಲೂಕಿನ ಕರೋಶಿ ಶಾನೂರಬಾಬಾ ದರ್ಗಾಕ್ಕೆ ದೇವರಿಗೆ ಬಂದಿದ್ದ ಬಡ ಕುಟುಂಬವೊಂದು ಹತ್ತಿರ ಹಣವೂ ಇಲ್ಲದೆ ಪರದಾಡುವಂತಾಗಿದೆ.
ನೆರೆಯ ಮಹಾರಾಷ್ಟ್ರ ಸೋಲ್ಲಾಪೂರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಬೋರಗಾಂವ ಎಂಬ ದೂರದ ಊರಿಂದ ನವಾಜ ಮುಲ್ಲಾ ಎನ್ನುವ ಕುಟುಂಬ ಅಮವಾಸ್ಯೆಯೆಂದು ದರ್ಗಾಕ್ಕೆ ದೇವರ ದರ್ಶಕ್ಕೆಂದು ಆಗಮಿಸಿದ್ದರು. ಅಮವಾಸ್ಯೆ ಮತ್ತು ಅಮವಾಸ್ಯೆಯಾದ ನಂತರ ಒಂದೆರಡು ದಿನ ದರ್ಗಾದಲ್ಲಿಯೇ ವಾಸವಾಗಿದ್ದರು. ಆದರೆ ದರ್ಗಾಕ್ಕೆ ಬೇಟಿ ನೀಡಿದ ಪೊಲೀಸರು ಕೊರೊನಾ ಹಿನ್ನೆಲೆಯಲ್ಲಿ ದರ್ಗಾದಲ್ಲಿ ಯಾರನ್ನೂ ಇಟ್ಟು ಕೊಳ್ಳಬೇಡಿ. ಇಲ್ಲಿ ಯಾರಾದರೂ ಇರುವುದು ಕಂಡರೇ ನಿಮ್ಮನ್ನು ಬಿಡುವುದಿಲ್ಲ ಎಂದು ಕಡಕ ತಾಕೀತು ಮಾಡಿದ್ದಕ್ಕೆ ಹೆದರಿದ ದರ್ಗಾ ಕಮೀಟಿವರು ಆ ಕುಟುಂಬವನ್ನು ದರ್ಗಾದಿಂದ ಹೊರಗೆ ಹಾಕಿದ್ದಾರೆ.
ನವಾಜಭಾಷಾ ಮುಲ್ಲಾ(60), ಸಾಯಿಬಿ ನವಾಜ ಮುಲ್ಲಾ(55) ಹಾಗೂ ಅವರ ಮಗ ಹೈದರ ಮುಲ್ಲಾ(28) ಮೂರು ಜನರ ಆ ಕುಟುಂಬ ಕೊರೊನಾ ಸಂಕಷ್ಟಕ್ಕೆ ಸಿಲುಕಿದೆ.
ದರ್ಗಾದಿಂದ ಹೊರಗೆ ಹಾಕಿದ್ದರಿಂದ ಕಂಗಾಲಾಗಿರುವ ಆ ಕುಟುಂಬಕ್ಕೆ ಎಲ್ಲಿ ಹೋಗಬೇಕು ಎನ್ನುವುದು ಗೊತ್ತಾಗದೇ ಕರೋಶಿ ಗ್ರಾಮದ ಬಳಿ ಇರುವ ಒಂದು ಹೊಲದಲ್ಲಿ ಗಿಡವೊಂದರ ಕೆಳಗೆ ಆಶ್ರಯ ಪಡೆದುಕೊಂಡಿದ್ದಾರೆ. ಊರಿಗೆ ಹೋಗಬೇಕು ಎಂದರೇ ಅವರ ಹತ್ತಿರ ಇದ್ದ ಹಣವೋ ಮಉಗಿದು ಹೋಗಿದೆ. ಬಸ್ ಸಂಚಾರ ಸಂಪೂರ್ಣ ಬಂದಾಗಿದೆ. ಹೀಗಾಗಿ ಆ ಬಡ ಕುಟುಂಬ ಊಟಕ್ಕೂ ಗತಿ ಇಲ್ಲದೆ ಪರದಾಡುವಂತಹ ಕೆಟ್ಟ ಪರಿಸ್ಥಿತಿ ಉಂಟಾಗಿದೆ.
ಊರಿಗೆ ಹೋಗಬೇಕು ಎಂದರೇ ಬಸ್ಸಿಲ್ಲಾ, ನಮ್ಮ ಹತ್ತಿರಿದ್ದ ರೊಕ್ಕಾ ಎಲ್ಲಾ ಮುಗ್ದಾವ್ರೀ, ಇಲ್ಲಿ ತುತ್ತು ಅಣ್ಣಕ್ಕಾಗಿ ಯಾರರ್ರೇ ಹತ್ರಾ ಕೈ ಚಾಚೋಣ ಎಂದರೇ ಎಲ್ಲಾ ಮಣಿ ಬಾಗೀಲ ಬಂದಾಗ್ಯಾವರ್ರೀ, ಈಗ ನಾವ್ ಏನ್ ಮಾಡ್ಬೇಕು ಅನ್ನೋದ ತೀಳ್ದಾಂಗೈತ್ರೀ ಎಂದು ಅತ್ಯಂತ ಸಂಕಷ್ಟದಲ್ಲಿ ಸಿಲುಕಿರುವ ಆ ಬಡ ಕುಟುಂಬ ಮಾಧ್ಯಮದವರ ಬಳ್ಳಿ ಕಣ್ಣೀರಿಟ್ಟಿರುವುದನ್ನು ಎಂತವರ ಮನಸ್ಸು ಸಹ ಕರಗುವಂತಿತ್ತು.
ಈಗಲಾದರೂ ಆ ಊರಿನ ಗ್ರಾಮ ಪಂಚಾಯತಿಯವರಾಗಲಿ ಅಥವಾ ತಾಲೂಕಾ ಆಡಳಿತವಾಗಲಿ ಕರೋಶಿ ಗ್ರಾಮದ ಗಿಡವೊಂದರ ಕೆಳಗೆ ನಿರ್ಜಣ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿರುವ ದೂರದ ಊರಿನ ಬಡ ಕುಟುಂಬದತ್ತ ಗಮನ ಹರಿಸಬೇಕು. ಸಂಕಷ್ಟದಲ್ಲಿ ಸಿಲುಕಿರುವ ಆ ಕುಟುಂಬದಕ್ಕೆ ಊಟ ವಸತಿಯ ವ್ಯವಸ್ಥೆಯನ್ನಾದರೂ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಶಯವಾಗಿದೆ.