ಬಾಗಲಕೋಟೆ: ಗಾನಯೋಗಿ, ಶಿವಯೋಗಿ ಪದ್ಮಭೂಷಣ ಪಂ.ಪುಟ್ಟರಾಜ ಕವಿ ಗವಾಯಿಗಳವರ ಪರಮಶಿಷ್ಯ ಹಾಗೂ ಅಂತರಾಷ್ಟ್ರೀಯ ಖ್ಯಾತ ತಬಲಾ ವಾದಕ ದಿವಂಗತ ಪಂಡಿತ ಹನುಮಂತಕುಮಾರ ಕಾರಟಗಿ ಅವರ ಪಂಚಮ ಪುಣ್ಯಸ್ಮರಣೆಯ ಅಂಗವಾಗಿ ‘ಸಾಧಕನಿಗೆ ಶತನಮನ ಸಂಗೀತ’ ವಿಶೇಷ ಕಾರ್ಯಕ್ರಮವನ್ನು ಅಕ್ಟೋಬರ್ 4ರಂದು ಆಯೋಜಿಸಲಾಗಿದೆ.

ಪಂ. ದಿ. ಹನುಮಂತ ಕಾರಟಗಿ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮವು ಅ.4ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ನವನಗರದ ಎಲ್.ಐ.ಸಿ. ಸರ್ಕಲ್ ಹತ್ತಿರವಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜರುಗಲಿದೆ. ಕಾರ್ಯಕ್ರಮದಲ್ಲಿ ಗದಗದ ಖ್ಯಾತ ತಬಲಾವಾದಕರಾದ ಪಂ. ಶರಣಪ್ಪ ಗುತ್ತರಗಿ ಅವರಿಗೆ ‘ದಿ. ಹನುಮಂತ ಕಾರಟಗಿ ಸವಿನೆನಪಿನ ಗೌರವ ಪ್ರಶಸ್ತಿ’ ಪ್ರಧಾನ ಮಾಡಿ ಸನ್ಮಾನಿಸಲಾಗುತ್ತಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಮುರನಾಳದ ಶ್ರೀ ಮಠೇರಾಜೇಂದ್ರ ಸ್ವಾಮಿಮಠದ ಜಗದ್ಗುರುಗಳಾದ, ಬ್ರಹ್ಮಶ್ರೀ ನಾದವೇದೋಪಾಸಕರು ಪ. ಪೂ. ಜಗನ್ನಾಥ ಸ್ವಾಮಿಗಳು ವಹಿಸಲಿದ್ದಾರೆ. ಹಿರಿಯ ಖ್ಯಾತ ಸಂಗೀತ ಕಲಾವಿದರಾದ ಎಚ್. ಆರ್. ಬಡಿಗೇರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಸಂಗೀತ ಶಿಕ್ಷಕರಾದ ರಾಧಾ ಎಚ್. ಕಾರಟಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗದಗ ಖ್ಯಾತ ಕೀರ್ತನಾಕಾರರಾದ ಪಂ. ಕಲ್ಲಿನಾಥ ಶಾಸ್ತ್ರಿಗಳು, ಬೆಂಗಳೂರಿನ ಸಂಗೀತ ನಿರ್ದೇಶಕರಾದ ಪಂ. ದೇವೇಂದ್ರಕುಮಾರ ಪತ್ತಾರ, ಬಾಗಲಕೋಟೆಯ ವಿಶ್ರಾಂತ ಸಿತಾರ ಪ್ರಾಧ್ಯಾಪಕರಾದ ಪ್ರೊ. ವಿ.ಜಿ. ಮಹಾಪೂರುಷ, ಬಾಗಲಕೋಟೆಯ ಹಿರಿಯ ಸಂಗೀತ ಕಲಾವಿದರಾದ ಪಂ. ಸಿದ್ರಾಮಯ್ಯ ಮಠಪತಿ ಹಾಗೂ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಶ್ರೀಶೈಲ್ ಕರಿಶಂಕರಿ ಭಾಗವಹಿಸಲಿದ್ದಾರೆ. ವಿಶೇಷ ಆಮಂತ್ರಿತ ಕಲಾವಿದರಾಗಿ ಧಾರವಾಡದ ಖ್ಯಾತ ಸಿತಾರ ವಾದಕ ಪಂ. ಶಪಿಖಾನ್, ಮೈಸೂರಿನ ಖ್ಯಾತ ಕೊಳಲು ವಾದಕ ಪಂ. ಶಮಿರರಾವ್ ಹಾಗೂ ಬೆಂಗಳೂರಿನ ಸುಗಮ ಸಂಗೀತ ತಂಡದವರು ಭಾಗವಹಿಸಿ ಸಂಗೀತ ಸುಧೆ ಹರಿಸಲಿದ್ದಾರೆ.
ಬಾಗಲಕೋಟೆಯ ಜ್ಞಾನಬಂಧುಗಳು, ಸಂಗೀತಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Laxmi News 24×7