Breaking News

ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದ್ರೆ 5 ಸಾವಿರ ರೂ. ದಂಡ; ಸರ್ಕಾರಕ್ಕೆ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಕೆ

Spread the love

ಬೆಂಗಳೂರು: ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಇನ್ಮುಂದೆ ಭಾರಿ ದಂಡ ಬೀಳುವ ಸಾಧ್ಯತೆ ಇದೆ. ನಿಯಮ ಉಲ್ಲಂಘಿಸುವವರಿಗೆ ಈಗಿರುವ ದಂಡಕ್ಕಿಂತ ಹಲವು ಪಟ್ಟು ಹೆಚ್ಚಿಸಲು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸದ್ಯ ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದರೆ 500 ರೂ. ದಂಡ ವಿಧಿಸಲಾಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಮೊದಲ ಬಾರಿ ಈ ನಿಯಮ ಉಲ್ಲಂಘನೆ ಮಾಡಿದವರಿಗೆ 5,000 ರೂ. ಹೆಚ್ಚಿಸುವಂತೆ ಸಾರಿಗೆ ಇಲಾಖೆ ಪ್ರಸ್ತಾವನೆ ನೀಡಿದೆ.

ಇದೇ ನಿಯಮವನ್ನು ಎರಡನೇ ಬಾರಿ ಉಲ್ಲಂಘಿಸಿದರೆ 10,000 ರೂ. ದಂಡ ವಿಧಿಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಯಾವುದೇ ರೀತಿಯ ವಾಹನವನ್ನು ಫುಟ್‌ಪಾತ್‌ ಮೇಲೆ ಚಲಾಯಿಸಿದರೂ ಈ ದಂಡ ಅನ್ವಯಿಸುವ ಸಾಧ್ಯತೆ ಇದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ಫುಟ್‌ಪಾತ್‌ ಮೇಲೆ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳು ರಸ್ತೆಗೆ ಇಳಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತದ ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ಹೆಚ್ಚಿಸುವ ಪ್ರಸ್ತಾವನೆ ಮಾಡಲಾಗಿದೆ.

ಸಾರಿಗೆ ಇಲಾಖೆ ಈ ಪ್ರಸ್ತಾವನೆ ಸಿದ್ಧಪಡಿಸಿದೆ. ಈ ಸಂಬಂಧ ಸಾರಿಗೆ ಆಯುಕ್ತರು ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಪ್ರಸ್ತಾವನೆಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಬಳಿಕ ಅಂತಿಮ ಆದೇಶ ಹೊರಡಿಸಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸರ್ಕಾರದ ಅಂತಿಮ ಆದೇಶದ ಬಳಿಕವಷ್ಟೇ ಹೊಸ ದಂಡ ಮೊತ್ತ ಜಾರಿಗೆ ಬರಲಿದೆ.

 


Spread the love

About Laxminews 24x7

Check Also

ತಡವಾಗಿ ಹೋಗಿದ್ದೇ ಹಿಂದಿನ ಸಾಲಲ್ಲಿ ಕೂರಲು ಕಾರಣ: ಸಿದ್ದರಾಮಯ್ಯ ಸ್ಪಷ್ಟನೆ

Spread the loveಬೆಂಗಳೂರು: ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿಯವರ  ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ