ಬೆಂಗಳೂರು: ಲಾಕ್‍ಡೌನ್ ದಿನಗಳನ್ನು ಎಲ್ಲ ನಟ, ನಟಿಯರು ವಿಭಿನ್ನವಾಗಿ ಬಳಸಿಕೊಳ್ಳುತ್ತಿದ್ದು, ಕೆಲವರು ತಮ್ಮ ಹವ್ಯಾಸಗಳತ್ತ ತಿರುಗಿದರೆ, ಇನ್ನೂ ಕೆಲವರು ಮನರಂಜನೆ, ಸಾಮಾಜಿಕ ಕಾರ್ಯ, ಸಹಾಯದ ರೀತಿಯ ಕೆಲಸಗಳಲ್ಲಿ ತೊಡಗಿದ್ದಾರೆ. ಬಿಡುವಿದ್ದಾಗಲೆಲ್ಲ ಕಮ್ಮಾರಿಕೆ ಮಾಡುವ ಮೂಲಕ ತಂದೆಗೆ ನೆರವಾಗುತ್ತಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಇಂದು ಮೊಬೈಲ್ ದುರ್ಬಳಕೆಯ ಅವಾಂತರಗಳ ಕುರಿತು ಗಮನ ಸೆಳೆದಿದ್ದಾರೆ.
ಹೌದು ಯುವಕರಿಗೆ ಅಪ್ಯಾಯಮಾನವಾಗುವ ರೀತಿಯಲ್ಲಿ ಮೊಬೈಲ್ ಕುರಿತು ಜಾಗೃತಿ ಮೂಡಿಸಿರುವ ರವಿ ಬಸ್ರೂರ್, ಸಂಗೀತದ ಮೂಲಕ ಮೋಡಿ ಮಾಡಿದ್ದಾರೆ. ವಿಭಿನ್ನ ಹಾಡು ರಚಿಸುವ ಮೂಲಕ ಮೊಬೈಲ್ ಬಂದ ಮೇಲೆ ಆಗಿರುವ ಅವಾಂತರಗಳ ಕುರಿತು ಗಮನಸೆಳೆದಿದ್ದಾರೆ. ಹಾಡು ಯುವಕರನ್ನು ಸೆಳೆಯುತ್ತಿದೆ. ಈ ಹಾಡನ್ನು ಅವರ ಯೂಟ್ಯೂಬ್ ಚಾನೆಲ್ ರವಿ ಬಸ್ರೂರ್ ಮ್ಯೂಸಿಕ್ ನಲ್ಲಿ ಹಾಕಿಕೊಂಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಹಾಡು ಕುಂದಾಪುರ ಭಾಷೆಯಲ್ಲಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೊಬೈಲ್ ಕೈಗೆ ಸಿಕ್ಕಿ ಮಕ್ಳ ಕೆಟ್ಟೊ, ಹೇಳಿದ್ದ್ ಕೇಂತಿಲ್ಲ, ಉಂಬುದೇ ಬಿಟ್ಟೊ, ರಸ್ತೆಂಗೆ ತಲಿ ಎತ್ತಿ ತಿರ್ಗುದೆ ಬಿಟ್ಟೊ ಎಂಬ ಸಾಲುಗಳ ಮೂಲಕ ಹಾಡು ಪ್ರಾರಂಭವಾಗುತ್ತೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಲಾಕ್‍ಡೌನ್ ಅವಧಿಯಲ್ಲಿ ರವಿ ಬಸ್ರೂರ್ ತಮ್ಮ ಹುಟ್ಟೂರು ಕುಂದಾಪುರಕ್ಕೆ ತೆರಳಿ ಕುಲ ಕಸುಬು ಕಮ್ಮಾರಿಕೆಯ ಕೆಲಸ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ಫೇಸ್ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದರು. ತಂದೆಗೆ ಸಹಾಯ ಮಾಡಲು ಕಮ್ಮಾರಿಕೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಲಾಕ್‍ಡೌನ್ ಅವಧಿಯಲ್ಲಿ ಹಾಡೊಂದನ್ನು ರಚಿಸಿ, ಸಂಯೋಜಿಸಿ ಬಿಡುಗಡೆ ಮಾಡಿದ್ದಾರೆ.
ಕೆಜಿಎಫ್ ಸಿನಿಮಾ ನಂತರ ರವಿ ಬಸ್ರೂರ್ ಅವರಿಗೆ ಹೆಚ್ಚು ಆಫರ್ ಗಳು ಬರುತ್ತಿದ್ದು, ಸ್ಯಾಂಡಲ್‍ವುಡ್ ಮಾತ್ರವಲ್ಲದೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ, ಮಡ್ಡಿ ಸಿನಿಮಾಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಲಾಕ್‍ಡೌನ್ ಹಿನ್ನೆಲೆ ತಮ್ಮ ಹುಟ್ಟೂರು ಕುಂದಾಪುರದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರ ಮಧ್ಯೆಯೇ ಈ ಹಾಡನ್ನು ರಚಿಸಿದ್ದಾರೆ. ಹೀಗೆ ಲಾಕ್‍ಡೌನ್ ಸಮಯವನ್ನು ರವಿ ಬಸ್ರೂರ್ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.