ಬೆಂಗಳೂರು: ಬೆಳಗಾವಿ ರಾಜಕಾರಣ ಪ್ರವೇಶಿಸಿದ್ದಕ್ಕೆ ಅಸಮಾಧಾನಗೊಂಡು ಡಿಕೆ ಶಿವಕುಮಾರ್ ವಿರುದ್ಧ ಬಂಡಾಯ ಸಾರಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಕೊನೆಗೂ ಡಿಕೆಶಿ ಬಳಿಯಿದ್ದ ಜಲಸಂಪನ್ಮೂಲ ಖಾತೆ ಸಿಕ್ಕಿದೆ.
ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಅಥವಾ ಇಂಧನ ಇಲಾಖೆ ಸಿಗಲಿದೆ ಎಂದು ಹೇಳಲಾಗುತಿತ್ತು. ಆದರೆ ಈಗ ವೈದ್ಯಕೀಯ ಶಿಕ್ಷಣ ಖಾತೆ ಫೈನಲ್ ಆಗಿದೆ
ಮಂತ್ರಿಗಳಾಗಿ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರೂ ಇನ್ನು ಖಾತೆ ಹಂಚಿಕೆ ಆಗಿರಲಿಲ್ಲ. ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಈ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ದಿನದಂದು ಎಲ್ಲ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರೆ, ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದ ಜಾರಕಿಹೊಳಿ ಮೌನ ಹಲವು ಪ್ರಶ್ನೆಗಳನ್ನು ಎತ್ತಿತ್ತು.
ಪ್ರಮಾಣವಚನಕ್ಕೂ ಮುನ್ನವೇ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಸಿಎಂ ಯಾವುದೇ ಖಚಿತ ಭರವಸೆ ನೀಡಿರಲಿಲ್ಲ. ಹೀಗಾಗಿ ಖಚಿತ ಭರವಸೆ ಸಿಗದ ಕಾರಣ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ದರು ಎಂದು ಹೇಳಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿ ಮತ್ತು ಗೃಹ ಖಾತೆಗಳ ಹಂಚಿಕೆ ಸದ್ಯಕ್ಕಿಲ್ಲ. ಇವೆರಡೂ ಖಾತೆಗಳನ್ನೂ ಹಂಚಿಕೆ ಮಾಡದಿರಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಳ್ಳಲಿದ್ದಾರೆ. ಗೃಹ ಖಾತೆ ಬಸವರಾಜ್ ಬೊಮ್ಮಾಯಿ ಬಳಿಯೇ ಉಳಿಯಲಿದೆ. ಈ ಎರಡೂ ಖಾತೆಗಳನ್ನು ಮಿತ್ರಮಂಡಳಿಗೆ ಹಂಚಿಕೆ ಮಾಡದಿರುವ ಮೂಲಕ ಪಕ್ಷದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಗೆ ಬ್ರೇಕ್ ಹಾಕಲು ಸಿಎಂ ಕಸರತ್ತು ನಡೆಸಿದ್ದಾರೆ.
ಜಾರಕಿಹೊಳಿಯವರಿಗೆ ಜಲಸಂಪನ್ಮೂಲ ಖಾತೆ ಕೊಡುವಂತೆ ಹೈಕಮಾಂಡ್‍ಗೂ ಸಿಎಂ ಮನವರಿಕೆ ಮಾಡಿದ್ದರು. ಡಿಸಿಎಂ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಖಾತೆ ಕೊಡಲು ಸಿಎಂ ಒಪ್ಪಿಕೊಂಡಿದ್ದಾರೆ.
ಯಾರಿಗೆ ಯಾವ ಖಾತೆ..?
1. ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ
2. ಎಸ್.ಟಿ ಸೋಮಶೇಖರ್ – ಸಹಕಾರ
3. ಬೈರತಿ ಬಸವರಾಜು – ನಗರಾಭಿವೃದ್ಧಿ ಇಲಾಖೆ
4. ಬಿ.ಸಿ.ಪಾಟೀಲ್ – ಅರಣ್ಯ ಇಲಾಖೆ
5. ಆನಂದ್ ಸಿಂಗ್ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
6. ಗೋಪಾಲಯ್ಯ – ಸಣ್ಣ ಕೈಗಾರಿಕೆ
7. ಶಿವರಾಮ್ ಹೆಬ್ಬಾರ್ – ಕಾರ್ಮಿಕ
8. ಶ್ರೀಮಂತ ಪಾಟೀಲ್ – ಜವಳಿ
9. ಡಾ.ಕೆ.ಸುಧಾಕರ್ – ವೈದ್ಯಕೀಯ ಶಿಕ್ಷಣ ಇಲಾಖೆ
10. ನಾರಾಯಣಗೌಡ – ಪೌರಾಡಳಿತ, ತೋಟಗಾರಿಕೆ