Breaking News
Home / ಜಿಲ್ಲೆ / ರಾಜ್ಯಪಾಲರ ಭಾಷಣದ ಹೈಲೈಟ್ಸ್ ಇಲ್ಲಿದೆ

ರಾಜ್ಯಪಾಲರ ಭಾಷಣದ ಹೈಲೈಟ್ಸ್ ಇಲ್ಲಿದೆ

Spread the love

ಬೆಂಗಳೂರು, ಫೆ.17-ದೇಶದಲ್ಲೇ ಆರ್ಥಿಕ ಸಂಪನ್ಮೂಲಗಳ ವೃದ್ಧಿಗಾಗಿ ಆರ್ಥಿಕ ಕ್ರೋಢೀಕರಣದ ಮಾರ್ಗನಕ್ಷೆಯನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ನಿಗದಿಪಡಿಸಲಾದ ಆರ್ಥಿಕ ಮತ್ತು ಸಾಲ ಕ್ರೋಢೀಕರಣದ ಗುರಿಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಸಾಧಿಸಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಅವರು ರಾಜ್ಯಸರ್ಕಾರಕ್ಕೆ ಬಹುಪರಾಕ್ ಹೇಳಿದ್ದಾರೆ.

ತಮ್ಮ 20 ಪುಟಗಳ ಭಾಷಣದಲ್ಲಿ ರಾಜ್ಯಪಾಲರು ಹಿಂದಿನ ಮೈತ್ರಿ ಸರ್ಕಾರ ಕೈಗೊಂಡಿದ್ದ ಕಾರ್ಯಕ್ರಮಗಳು ಹಾಗೂ ಈಗಿನ ಬಿಜೆಪಿ ಸರ್ಕಾರದ ಹೊಸ ಯೋಜನೆಗಳು ಸೇರಿದಂತೆ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯುವ ಬಗ್ಗೆ ಉಲ್ಲೇಖಿಸಿದರು. ಇಂದಿನಿಂದ ಆರಂಭವಾದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು ಒಂದೆರಡು ಹೊಸ ಯೋಜನೆಗಳನ್ನು ಘೋಷಿಸಿರುವುದು ಹೊರತುಪಡಿಸಿದರೆ ಉಳಿದಂತೆ ಮೈತ್ರಿ ಸರ್ಕಾರದ ಕಾರ್ಯಕ್ರಮಗಳನ್ನೇ ಮುಂದುವರೆಸುವುದು ಮತ್ತು ಆರು ತಿಂಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಉಲ್ಲೇಖ ಮಾಡಿದ್ದಾರೆ

ಇಡೀ ದೇಶದಲ್ಲೇ ಬಿಜೆಪಿ ಬೆಳವಣಿಗೆಗೆ ಕರ್ನಾಟಕದ ಕೊಡುಗೆ ಗಣನೀಯವಾಗಿದೆ. ಬೆಂಗಳೂರು ನಗರವು ತನ್ನದೇ ಆದ ಪ್ರತಿಭಾವಂತ ಕಾರ್ಯಪಡೆ ಮತ್ತು ಸಂಶೋಧನೆಗಳನ್ನು ನಡೆಸುವ ಮೂಲಕ ವಿಶ್ವದಲ್ಲೇ ಖ್ಯಾತಿ ಪಡೆದಿದೆ. ರಾಜ್ಯದ ದ್ವಿತೀಯ ಶ್ರೇಣಿಯ ನಗರಗಳನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ ಎಂದು ಪರೋಕ್ಷವಾಗಿ ರಾಜ್ಯಸರ್ಕಾರಕ್ಕೆ ಸಲಹೆ ಮಾಡಿದರು.
ಕಳೆದ ಅಕ್ಟೋಬರ್‍ನಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಭಾರೀ ಪ್ರಮಾಣದ ನಷ್ಟ ಉಂಟಾಯಿತು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಮರೋಪಾದಿಯಲ್ಲಿ ರಕ್ಷಣಾ ಹಾಗೂ ಪರಿಹಾರೋಪಾಯಗಳನ್ನು ಕೈಗೊಂಡು ಸಂತ್ರಸ್ತರಿಗೆ ನೆರವು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮನೆ ಕಳೆದುಕೊಂಡವರಿಗೆ ಹೊಸದಾಗಿ ಮನೆ ನಿರ್ಮಾಣಕ್ಕೆ 5 ಲಕ್ಷ, ಪುನರ ನಿರ್ಮಾಣಕ್ಕೆ 3 ಲಕ್ಷ, ಭಾಗಶಃ ಹಾನಿಗೊಳಗಾದ ಮನೆಗಳಿಗೆ 50ಸಾವಿರ ಹಣಕಾಸಿನ ನೆರವು ನೀಡಲಾಗಿದೆ. ಈವರೆಗೂ ಒಟ್ಟು 1.24 ಲಕ್ಷ ಮನೆಗಳಿಗೆ 827 ಕೋಟಿ ರೂ. ಹಣಕಾಸು ನೆರವು ಬಿಡುಗಡೆ ಮಾಡಲಾಗಿದೆ ಎಂದರು.

ನೆರೆ ಹಾವಳಿಯಿಂದ ಹಾನಿಗೊಳಗಾದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‍ಡಿಆರ್‍ಎಫ್) ಮತ್ತು ರಾಷ್ಟ್ರ ವಿಪತ್ತು ಪರಿಹಾರ ನಿಧಿ (ಎನ್‍ಡಿಆರ್‍ಎಫ್) ವತಿಯಿಂದ 3,800ರೂ.ಗಳಿಗೆ ಹೆಚ್ಚುವರಿಯಾಗಿ 6,200 ರೂ. ಸೇರಿದಂತೆ ಈವರೆಗೂ 2.07 ಲಕ್ಷ ಕುಟುಂಬಗಳಿಗೆ 207 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಸುಸ್ಥಿರ ಹಣಕಾಸು ನೆರವು ಹಾಗೂ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಎಸ್‍ಡಿಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್ ಮಾನದಂಡ ಹೊರತುಪಡಿಸಿ ಪ್ರತಿ ಕುಟುಂಬಗಳಿಗೆ 10 ಸಾವಿರ ಹೆಚ್ಚುವರಿಯಾಗಿ ಸಹಾಯಧನ ನೀಡಲಾಗಿದೆ. ಈವರೆಗೂ 6.38 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 1226 ಕೋಟಿ ರೂ. ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೃಷಿ ಆಧಾರಿತ ಅರ್ಹ ಕುಟುಂಬಗಳಿಗೆ ಕೇಂದ್ರ ಸರ್ಕಾರದ 6,000 ರೂ.ಹಣಕಾಸಿನ ನೆರವಿನ ಜೊತೆಗೆ 4,000 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡುತ್ತಿದೆ. ಈವರೆಗೂ 41 ಲಕ್ಷ ರೈತ ಬ್ಯಾಂಕ್‍ಗಳಿಗೆ 825 ಕೋಟಿ ರೂ. ನೀಡಲಾಗಿದೆ ಎಂದು ಪ್ರಶಂಸಿಸಿದರು. ದೇಶದಲ್ಲೇ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಎರಡನೇ ದೊಡ್ಡ ರಾಜ್ಯವಾಗಿದೆ. 2019ರ ಡಿಸೆಂಬರ್ ಅಂತ್ಯದವರೆಗೂ 9ಲಕ್ಷ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ.ಗಳ ಪ್ರೋತ್ಸಾಹ ಧನ ಸಂದಾಯ ಮಾಡಲು 691 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಬೃಹತ್ ನೀರಾವರಿ ಯೋಜನೆಗಳ ಮುಖಾಂತರ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸಾಮಥ್ರ್ಯ ಕಲ್ಪಿಸಲಾಗಿದೆ. ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ 450 ಕೋಟಿ ರೂ. ವೆಚ್ಚದಲ್ಲಿ ವಿಜಯನಗರ ಕಾಲುವೆ ಆಧುನೀಕರಣ ಹಾಗೂ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಮಲಪ್ರಭಾ ಕಾಲುವೆ ಯೋಜನೆ ಆಧುನೀಕರಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

475 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೇಮಾವತಿ ನಾಲೆಯ 70 ಕಿ.ಮೀ. ಆಧುನೀಕರಣ ಹಾಗೂ 500 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ನಾಲೆಯ 166 ಕಿ.ಮೀ. ಆಧುನೀಕರಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 4050 ಕೋಟಿ ರೂ. ವೆಚ್ಚದಲ್ಲಿ ಇತರೆ 21 ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. 175 ಕೆರೆಗಳನ್ನು ಭರ್ತಿ ಮಾಡಲು 496 ಕೋಟಿ ರೂ.ಅಂದಾಜು ವಚ್ಚದಲ್ಲಿ ನಾಲ್ಕು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿ ಈವರೆಗೆ 3 ಲಕ್ಷದ 30 ಸಾವಿರ ಫಲಾನುಭವಿಗಳಿಗೆ ಚಿಕಿತ್ಸೆಗಾಗಿ ಅನುಮೋದನೆ ನೀಡಲಾಗಿದೆ.

ನವೆಂಬರ್ 1, 2019ರಿಂದ ಜಾರಿಗೆ ಬರುವಂತೆ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ಮೂರೂವರೆ ಸಾವಿರದಿಂದ 4 ಸಾವಿರದವರೆಗೆ ಹೆಚ್ಚಿಸಿದೆ.  ಚಿಕ್ಕಮಗಳೂರು, ಯಾದಗಿರಿ, ಹಾವೇರಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳ ಪ್ರಸ್ತಾವನೆಗೆ ಅನುಮೋದನೆ ನೀಡುವ ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ ಎಂದು ಹೇಳಿದರು.

ಅಪೌಷ್ಟಿಕತೆ ಇರುವ ಮಕ್ಕಳಿಗೆ ಚಿಕಿತ್ಸೆ ನೀಡಲು 49 ತಾಲೂಕು ಆಸ್ಪತ್ರೆಗಳಲ್ಲಿ 49 ಪೌಷ್ಟಿಕತೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕ್ಯಾನ್ಸರ್ ತಪಾಸಣೆ ಸೌಲಭ್ಯಗಳಿಲ್ಲದ ರಾಜ್ಯದ 10 ಜಿಲ್ಲಾಸ್ಪತ್ರೆಗಳಲ್ಲಿ ಸಂಚಾರಿ ಮ್ಯಾಮೊಗ್ರಫಿ ಕ್ಯಾನ್ಸರ್ ಡಯೋಗ್ನಾಸ್ಟಿಕ್ ಘಟಕ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಗುತ್ತಿದ್ದ ಗೌರವಧನವನ್ನು ಮಾಸಿಕ 8 ರಿಂದ 10ಸಾವಿರದವರೆಗೆ, ಅಂಗನವಾಡಿ ಸಹಾಯಕರ ಗೌರವಧನವನ್ನು 4 ಸಾವಿರದಿಂದ 5,250 ರೂ.ಗಳಿಗೆ ಹೆಚ್ಚಿಸಿದೆ. ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿದ್ದ ಭಾಗ್ಯಲಕ್ಷ್ಮಿ ಬಾಂಡ್‍ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಹಾಗೂ ಹೆಚ್ಚುವರಿ 10 ಸಾವಿರ ಸ್ವಸಹಾಯ ಗುಂಪುಗಳನ್ನು ಹೊಸದಾಗಿ ರಚಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.
3.73 ಲಕ್ಷ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಮೆಟ್ರಿಕ್ ಪೂರ್ವಹಾಗೂ ಮೆಟ್ರಿಕ್ ನಂತರದ ಹಾಸ್ಟೆಲ್, ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರವೇಶಾತಿ ನೀಡಲಾಗಿದೆ.


ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿದ್ಯಾರ್ಥಿ ವೇತನ, ಶಿಕ್ಷಣ ಸಾಲಗಳ ಮಂಜೂರಾತಿ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ 4,762 ಕೋಟಿ ರೂ. ಒದಗಿಸಲಾಗಿದೆ.

ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಧ್ಯೆಯೋದ್ದೇಶದಿಂದ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳನ್ನು ಒಗ್ಗೂಡಿಸುವ ಮೂಲಕ 1 ರಿಂದ 12ನೇ ತರಗತಿಯವರೆಗೆ 276 ಪಬ್ಲಿಕ್ ಶಾಲೆಗಳನ್ನು ಆರಂಭಿಸಿದೆ. ಶಾಲಾ ಮಕ್ಕಳು ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸಲು ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ವಾಟರ್ ಬೆಲ್ (ನೀರು ಸೇವನೆಯ ಘಂಟೆ) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.  411 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವ 1.7 ಲಕ್ಷ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ರಾಯಚೂರು ವಿವಿ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ.

ರಾಯಚೂರಿನಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಸ್ಥಾಪಿಸಲಾಗಿದೆ. ರಾಜ್ಯವು ನವೀಕರಿಸಬಹುದಾದ ಇಂಧನವಲಯದಲ್ಲಿ ಬೇರೆ ರಾಜ್ಯಗಳಿಗಿಂತಲೂ ಮುಂಚೂಣಿಯಲ್ಲಿದೆ. ಪಾವಗಡದ ಅಲ್ಟ್ರಾ ಮೆಗಾ ಸೋಲಾರ್ ಯೋಜನೆ ಪೂರ್ಣಗೊಂಡಿದ್ದು, ಇದರಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ವಿದ್ಯುತ್ ಲಭ್ಯವಾಗಲಿದೆ. ಜೊತೆಗೆ ಕೊಪ್ಪಳ, ಬೀದರ್, ಗದಗದಲ್ಲಿ ಅಲ್ಟ್ರಾ ಮೆಗಾ ಪವರ್ ಪಾರ್ಕ್‍ಗಳನ್ನು ಸ್ಥಾಪಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೂ ಒತ್ತು ಕೊಡಲಾಗಿದೆ. ಅಲ್ಲಿನ ಜನತೆಯ ಬಹುದಿನಗಳ ಬೇಡಿಕೆಯಂತೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದೆ.
2019ರ ಡಿಸೆಂಬರ್ ಅಂತ್ಯಕ್ಕೆ 936 ಕೋಟಿ ರೂ. ವೆಚ್ಚ ಭರಿಸಲಾಗಿದೆ. 1 ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಪ್ರಸ್ತುತ ಅಧಿವೇಶನದಲ್ಲಿ ವಿಚಾರ ವಿಮರ್ಶೆ ಮತ್ತು ಚರ್ಚೆಗಳ ಗುಣಾತ್ಮಕತೆಯನ್ನು ಸದಸ್ಯರು ನಿರ್ವಹಿಸಬೇಕೆಂದು ಸಲಹೆ ಮಾಡಿದ ಅವರು, ವಿಚಾರ ಮಂಥನದಿಂದ ಹೊರಹೊಮ್ಮುವ ಹೊಸ ಆಲೋಚನೆಗಳು, ವಿಚಾರಗಳು ರಾಜ್ಯವನ್ನು ಅತ್ಯುನ್ನತ ಬೆಳವಣಿಗೆ ಮತ್ತು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿ ಎಂದು ಆಶಿಸಿ ರಾಜ್ಯಪಾಲರು ಭಾಷಣ ಮುಕ್ತಾಯಗೊಳಿಸಿದರು.


Spread the love

About Laxminews 24x7

Check Also

ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ

Spread the love ಇತ್ತೀಚಿನ ದಿನಗಳಲ್ಲಿ ವಿವಾಹಿತ ಪುರುಷರು ಮತ್ತು ಮಹಿಳೆಯರ ಅಕ್ರಮ ಸಂಬಂಧದ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಇಂತಹದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ