ರಾಯಚೂರು: ನಗರದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಆಚರಣೆ ವೇಳೆ ರಾಜಕಾರಣಿಗಳೇ ಸಾಮಾಜಿಕ ಅಂತರ ಮರೆತು ಗುಂಪುಗುಂಪಾಗಿ ನಿಂತು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಕೊರೊನಾ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಸೋಂಕನ್ನು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸರ್ಕಾರಗಳು ಮತ್ತು ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಸೇರಿ ಹಲವರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ವೇಳೆ ಸಾಮಾಜಿಕ ಅಂತರವನ್ನೇ ಮರೆತಿದ್ದರು.
ಶಾಸಕ ಶಿವರಾಜ್ ಪಾಟೀಲ್ ಹಾಗೂ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಗುಂಪು ಗುಂಪಾಗಿ ನಿಂತು ಫೋಟೋ ತೆಗೆಸಿಕೊಂಡರು. ಸುಮಾರು ಹೊತ್ತು ಒಟ್ಟಾಗಿ ಕುಳಿತು ಮಾತನಾಡಿದರು. ಸಾಮಾಜಿಕ ಅಂತರ ಕಾಪಾಡುವಂತೆ ಪೊಲೀಸರು ಮೈಕ್ ನಲ್ಲಿ ಅನೌನ್ಸ್ ಮಾಡಿದರೂ ತಿಳಿದುಕೊಳ್ಳದ ರಾಜಕಾರಣಿಗಳು ಗುಂಪುಗುಂಪಾಗಿ ಓಡಾಡಿ ಬಳಿಕ ಅಲ್ಲಿಂದ ತೆರಳಿದರು.