ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿತರನ್ನು ಅರಣ್ಯ ಇಲಾಖೆ ಶನಿವಾರ ಬಂಧಿಸಿ, ಹೆಚ್ಚಿನ ವಿಚಾರಣೆ ಕೈಗೊಂಡಿದೆ.
ಹನೂರು ತಾಲೂಕಿನ ಕೊಪ್ಪ ಗ್ರಾಮದ ಹಸುವಿನ ಮಾಲೀಕ ಕೋನಪ್ಪ ಹಾಗೂ ಹಸುವಿನ ಮೃತದೇಹಕ್ಕೆ ವಿಷಪ್ರಾಶನ ಮಾಡಿದ ಆರೋಪದ ಮೇಲೆ ಮಾದುರಾಜ್ ಹಾಗೂ ನಾಗರಾಜು ಪೂಜಾರಿಗೌಡ ಎಂಬ ದನಗಾಹಿಗಳನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಮೀಣ್ಯಂ ಸಮೀಪವೇ ಕೊಪ್ಪ ಗ್ರಾಮವಿದ್ದು ಜಾನುವಾರುಗಳಿಗೆ ಹುಲಿ ಉಪಟಳ ಕೊಡುತ್ತಿದೆ ಎಂಬ ಕೋಪಕ್ಕೆ ಹುಲಿ ಬೇಟೆಯಾಡಿದ್ದ ಹಸುವಿನ ದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿರುವುದಾಗಿ ಆರಂಭಿಕ ವಿಚಾರಣೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮರಣೋತ್ತರ ಪರೀಕ್ಷೆಯಲ್ಲಿ ವಿಷ ಸತ್ಯ ಬಯಲು: ಮೃತಪಟ್ಟಿದ್ದ 5 ಹುಲಿಗಳಲ್ಲಿ ತಾಯಿ ಹುಲಿ ಸೇರಿದಂತೆ ನಾಲ್ಕು ಹೆಣ್ಣು ಹುಲಿ ಹಾಗೂ ಒಂದು ಗಂಡು ಹುಲಿಗಳಾಗಿವೆ. ತಾಯಿ ಹುಲಿಗೆ 8 ವರ್ಷ ಮತ್ತು ಮರಿಗಳಿಗೆ 8-10 ತಿಂಗಳು ಎಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ. ಹುಲಿಗಳು ಮೃತಪಟ್ಟು 3 ದಿನಗಳ ಬಳಿಕ ಕೇಸ್ ಬೆಳಕಿಗೆ ಬಂದಿತ್ತು.
ಹಸುವಿನ ಮೃತದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದರಿಂದ ಹಸುವಿನ ಮಾಂಸ ತಿಂದಿದ್ದ ಹುಲಿಗಳು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ. ಹೆಚ್ಚಿನ ತನಿಖೆಗಾಗಿ ಹುಲಿ ಮತ್ತು ಹಸುವಿನ ಅಂಗಾಂಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.
Laxmi News 24×7