ದಾವಣಗೆರೆ: ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿ ತಾಯಿ – ಮಗ ಮೃತಪಟ್ಟಿರುವ ದಾರುಣ ಘಟನೆ ನಗರದ ಕಾಯಿಪೇಟೆಯಲ್ಲಿ ನಡೆದಿದೆ. ಬೆಂಕಿಯಿಂದ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ವಿಮಲಾ (75) ಮತ್ತು ಅವರ ಪುತ್ರ ಕುಮಾರ್ (35) ಪ್ರಾಣ ಕಳೆದುಕೊಂಡ ದುರ್ದೈವಿಗಳು. ಮೃತರು ಬಿಜೆಪಿ ಮುಖಂಡ ರುದ್ರಮುನಿಸ್ವಾಮಿ ಅವರ ಸಂಬಂಧಿಗಳಾಗಿದ್ದಾರೆ.
ತಡರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿವೆ. ಇದರಿಂದ ದಟ್ಟ ಹೊಗೆ ಆವರಿಸಿದೆ. ಮನೆಯಲ್ಲಿದ್ದ 6 ಮಂದಿಯ ಪೈಕಿ ನಾಲ್ವರು ಹೊರಗೆ ಓಡಿ ಬಂದಿದ್ದಾರೆ. ವಿಮಲಾ ಮತ್ತು ಕುಮಾರ್ ಹೊರಬರಲಾಗದೇ ಕೋಣೆಯಲ್ಲಿಯೇ ಸಿಲುಕಿಕೊಂಡಿದ್ದಾರೆ.
ಪ್ರಾಣ ತೆಗೆದ ಹೊಗೆ: ಬಾಗಿಲು ಲಾಕ್ ಆಗಿದ್ದರಿಂದ ಇಬ್ಬರೂ ಕೋಣೆಯಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಶಂಕಿಸಲಾಗಿದೆ. ಅಲ್ಲಿಯೇ ಸಿಲುಕಿದ್ದರಿಂದ ಉಸಿರಾಡಲು ಸಾಧ್ಯವಾಗದೆ, ತೀವ್ರ ಅಸ್ವಸ್ಥರಾಗಿ ಕೋಣೆಯಲ್ಲಿ ಬಿದ್ದಿದ್ದರು.
ತಕ್ಷಣವೇ ಕುಟುಂಬಸ್ಥರು, ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕೋಣೆಯಲ್ಲಿ ಪ್ರಜ್ಞೆ ಕಳೆದುಕೊಂಡಿದ್ದ ಇಬ್ಬರನ್ನೂ ರಕ್ಷಿಸಿ, ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ತೀವ್ರ ಅಸ್ವಸ್ಥರಾಗಿದ್ದರಿಂದ ಚಿಕಿತ್ಸೆ ಫಲಿಸದೇ ಇಬ್ಬರೂ ಸಾವಿಗೀಡಾಗಿದ್ದಾರೆ.
ಮನೆಯಲ್ಲಿನ ವಸ್ತುಗಳು ಬೆಂಕಿಗಾಹುತಿ: ಇನ್ನು, ಮನೆಯಲ್ಲಿದ್ದ ಎಲ್ಲ ವಸ್ತುಗಳು ಬೆಂಕಿಗಾಹುತಿಯಾಗಿವೆ. ಪೀಠೋಪಕರಣಗಳು, ಎಲೆಕ್ಟ್ರಾನಿಕ್, ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ಮೀನಿನ ಅಕ್ವೇರಿಯಂನಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಹಿನ್ನೆಲೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮ ದಳ ಸಿಬ್ಬಂದಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್.ಪಿ. ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಜೆಪಿ ಮುಖಂಡರು ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.
Laxmi News 24×7