ನವದೆಹಲಿ: ದೇಶಾದ್ಯಂತ ಅನ್ಯಾಯದ ವಿರುದ್ಧ ನಡೆಯುತ್ತಿರುವ ಹೋರಾಟಗಳು ಹಾಗೂ ಪ್ರತಿಭಟನೆಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ಜನರ ಧ್ವನಿಯನ್ನು ರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ `ಸತ್ಯಾಗ್ರಹ’ ಹೆಸರಿನ ಹೊಸ ಡಿಜಿಟಲ್ ವೇದಿಕೆಯನ್ನು ಆರಂಭಿಸಿದ್ದಾರೆ.
ಗಾಂಧಿ ಜಯಂತಿ ಹಿನ್ನೆಲೆ ವೇದಿಕೆ ಆರಂಭಿಸಲಾಗಿದ್ದು, ಸತ್ಯ, ಅಹಿಂಸೆ ಹಾಗೂ ಅನ್ಯಾಯದ ವಿರುದ್ಧ ನಿರ್ಭೀತ ಪ್ರತಿರೋಧದ ಆಶಯಗಳನ್ನು ಇಂದಿನ ಹೋರಾಟಗಳಿಗೆ ಸಂಪರ್ಕಿಸುವ ಉದ್ದೇಶ ಹೊಂದಿದೆ. ದೇಶದ ವಿವಿಧ ಭಾಗಗಳಲ್ಲಿ ಜನರು ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಭೂಮಿ, ಮಹಿಳಾ ಹಕ್ಕುಗಳು, ದಲಿತರು, ಒಬಿಸಿ ಹಕ್ಕುಗಳು, ಶಿಕ್ಷಣ, ಪರೀಕ್ಷೆಗಳು ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಇಂತಹ ವಿವಿಧ ಹೋರಾಟಗಳನ್ನು ಸಂಘಟಿಸಿ, ಒಂದೇ ನಕ್ಷೆಯಲ್ಲಿ ದಾಖಲಿಸಿ, ಹೋರಾಟಗಾರರೊಂದಿಗೆ ಕೈಜೋಡಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗುವುದು ವೇದಿಕೆಯ ಉದ್ದೇಶವಾಗಿದೆ ಎಂದು ಹೇಳಿದರು.
`ಸತ್ಯಾಗ್ರಹ’ ವೆಬ್‌ಸೈಟ್ ಆರಂಭದ ಕುರಿತು ಮಾತನಾಡಿರುವ ರಾಹುಲ್ ಗಾಂಧಿ, ದೇಶದಾದ್ಯಂತ ಜನರು ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಪ್ರತಿಪಕ್ಷ ನಾಯಕನಾಗಿ ಅವರ ಹೋರಾಟವೂ ತಮ್ಮ ಹೋರಾಟವೇ ಆಗಿದ್ದು, ಜನರು ತಾವು ಯಾವ ವಿಚಾರಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದನ್ನು ತಿಳಿಸುವಂತೆ ಕರೆ ನೀಡಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಲು ತಾವು ಸಿದ್ಧರಿರುವುದಾಗಿ ನುಡಿದರು.
ಸತ್ಯವನ್ನು ಹತ್ತಿಕ್ಕಲಾಗುತ್ತಿರುವ ಸಂದರ್ಭದಲ್ಲಿ ಜನರು ಪ್ರತಿರೋಧಿಸಲು ನೆರವಾಗುವುದು ಪ್ರತಿಪಕ್ಷ ನಾಯಕನಾಗಿ ತಮ್ಮ ಜವಾಬ್ದಾರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ದೇಶದಾದ್ಯಂತ ಸತ್ಯದ ಮಹತ್ವವಿದ್ದು, ದೇಶದ ಉನ್ನತ ಮಟ್ಟದಿಂದ ಹಿಡಿದು ಪ್ರತಿಯೊಂದು ಭಾಗದಲ್ಲೂ ಸತ್ಯಕ್ಕಾಗಿ ಹೋರಾಡುವುದು ಅಗತ್ಯ ಎಂದು ಪ್ರತಿಪಾದಿಸಿದರು.
`ಸತ್ಯಾಗ್ರಹ ಮ್ಯಾಪ್’ನಲ್ಲಿ ಸಮಸ್ಯೆಗಳ ದಾಖಲು:
ಹೊಸ ಡಿಜಿಟಲ್ ವೇದಿಕೆಯ ಮೂಲಕ ನಾಗರಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಜನರು ತಮ್ಮ ಸಮಸ್ಯೆ, ತಮ್ಮ ಹಕ್ಕುಗಳಿಗೆ ಅಡ್ಡಿಯಾಗುತ್ತಿರುವ ವಿಚಾರ ಹಾಗೂ ಸಂಬಂಧಿಸಿದ ಮಾಹಿತಿಯನ್ನು ವೇದಿಕೆಯಲ್ಲಿ ಸಲ್ಲಿಸಬಹುದಾಗಿದೆ.
ವೇದಿಕೆಯಲ್ಲಿ ಸಲ್ಲಿಸಲಾದ ಪ್ರತಿಯೊಂದು ಸಮಸ್ಯೆಯೂ `ಸತ್ಯಾಗ್ರಹ ಮ್ಯಾಪ್’ನಲ್ಲಿ ಪ್ರತ್ಯೇಕ ಪಿನ್ ಆಗಿ ಕಾಣಿಸಿಕೊಳ್ಳಲಿದೆ. ದೇಶದ ವಿವಿಧೆಡೆ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಗಳನ್ನು ಒಂದೇ ನಕ್ಷೆಯಲ್ಲಿ ತೋರಿಸುವ ಮೂಲಕ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗಮನಕ್ಕೆ ತರುವ ಉದ್ದೇಶ ಹೊಂದಲಾಗಿದೆ. ಸಲ್ಲಿಕೆಯಾಗುವ ಸಮಸ್ಯೆಗಳ ಗಂಭೀರತೆಯನ್ನು ಆಧರಿಸಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನರ ಧ್ವನಿ ಬೀದಿಯಿಂದ ಸಂಸತ್ತಿನವರೆಗೆ ತಲುಪುವಂತೆ ಮಾಡಲು ವೇದಿಕೆ ನೆರವಾಗಲಿದೆ ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.
Laxmi News 24×7