ಮಂಡ್ಯ: ಮೇಲುಕೋಟೆಯ ಪ್ರಸಿದ್ಧ ಚಲುವನಾರಾಯಣಸ್ವಾಮಿಯ ವೈರಮುಡಿ ಮಹೋತ್ಸವಕ್ಕೂ ಕೊರೊನಾ ವೈರಸ್ ಭೀತಿ ತಟ್ಟುತ್ತಾ ಎಂಬ ಆತಂಕ ಭಕ್ತರಲ್ಲಿ ಕಾಡುತ್ತಿದೆ.
ಏಪ್ರಿಲ್ 2ರಂದು ಮೇಲುಕೋಟೆಯ ವಿಶ್ವ ಪ್ರಸಿದ್ಧ ಚಲುವನಾರಾಯಣಸ್ವಾಮಿಯ ವೈರಮುಡಿ ಮಹೋತ್ಸವ ನಡೆಸಲು ಈಗಾಗಲೇ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಇತ್ತ ರಾಜ್ಯ ಸೇರಿದಂತೆ ದೇಶಾದ್ಯಂತ ಕೊರೊನಾ ವೈರಸ್‍ನ ಭೀತಿ ಎದುರಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಸರ್ಕಾರ 1 ವಾರಗಳ ಕಾಲ ಸೀಮಿತ ವಲಯಗಳಿಗೆ ಬಂದ್‍ನ್ನು ಸಹ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯಾದ್ಯಂತ ಯಾವುದೇ ಜಾತ್ರಾ ಮಹೋತ್ಸವಗಳು ಜರುಗದಂತೆ ಆದೇಶವನ್ನೂ ಹೊರಡಿಸಲಾಗಿದೆ.
ಕೊರೊನಾ ವೈರಸ್ ಭೀತಿ ಒಂದು ವೇಳೆ ನಿಲ್ಲದಿದ್ದರೆ ಏಪ್ರಿಲ್ 2ರಂದು ನಡೆಯುವ ವೈರಮುಡಿ ಮಹೋತ್ಸವಕ್ಕೂ ಕೊರೊನಾ ಬಿಸಿ ತಟ್ಟಲಿದೆ. ವೈರಮುಡಿ ಮಹೋತ್ಸವ ಇನ್ನೂ 15 ದಿನಗಳು ಇರುವ ಕಾರಣ ವೈರಮುಡಿ ಮಹೋತ್ಸವಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಪ್ರತಿ ವರ್ಷ ಈ ಮಹೋತ್ಸವಕ್ಕೆ ಲಕ್ಷಾಂತರ ಜನರು ಬರುತ್ತಿದ್ದರು. ಆದರೆ ಈ ಬಾರಿ ವೈರಮುಡಿ ಮಹೋತ್ಸವ ನಡೆದರು ಸಹ ಕೊರೊನಾ ವೈರಸ್ ಭೀತಿಯಿಂದ ಜನರು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇತಿಹಾಸದಲ್ಲೇ ವೈರಮುಡಿ ಮಹೋತ್ಸವ ಒಂದು ಬಾರಿಯೂ ಸಹ ನಿಂತಿಲ್ಲ. ವೈರಮುಡಿ ಮಹೋತ್ಸವ ನಿಲ್ಲುವ ಸಾಧ್ಯತೆ ಕಡಿಮೆ ಇದೆ. ಮಹೋತ್ಸವಕ್ಕೆ 15 ದಿನಗಳು ಇರುವ ಕಾರಣ ಈ ಬಗ್ಗೆ ಸಚಿವರು ಹಾಗೂ ಅರ್ಚಕರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಅವರು ತಿಳಿಸಿದ್ದಾರೆ.