Breaking News

ಬೆಳಗಾವಿಯಲ್ಲಿ ಖಾಕಿ ಘರ್ಜನೆ: 40ಕ್ಕೂ ಹೆಚ್ಚು ಕ್ಲಬ್, ಪಬ್, ಹೋಟೆಲ್‌ಗಳ ಮೇಲೆ ಏಕಕಾಲಕ್ಕೆ ರೇಡ್!

Spread the love

ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ನಡೆಯುತ್ತಿದ್ದ ನೈಟ್‌ಲೈಫ್ ಚಟುವಟಿಕೆಗಳಿಗೆ ಬೆಳಗಾವಿ ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರ ಖಡಕ್ ನೇತೃತ್ವದಲ್ಲಿ ನಗರದ ಬರೋಬ್ಬರಿ 40ಕ್ಕೂ ಹೆಚ್ಚು ಕ್ಲಬ್, ಪಬ್, ಪ್ರತಿಷ್ಠಿತ ಹೋಟೆಲ್‌ಗಳು ಹಾಗೂ ಡಾಬಾಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಶಾಕ್ ನೀಡಲಾಗಿದೆ.

ಶನಿವಾರ ತಡರಾತ್ರಿ ನಗರದಾದ್ಯಂತ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಹಲವು ಅಡ್ಡಾಗಳನ್ನು ಸ್ಥಳದಲ್ಲೇ ಬಂದ್ ಮಾಡಿಸಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

ನಗರದ ಪ್ರಭಾವಿ ರಾಜಕಾರಣಿಗಳ ಒಡೆತನದಲ್ಲಿದ್ದವು ಎನ್ನಲಾದ ಕೆಲ ಪ್ರಮುಖ ಹಾಗೂ ಪ್ರತಿಷ್ಠಿತ ಕ್ಲಬ್‌ಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಭಾವ, ಪ್ರತಿಷ್ಠೆ ಯಾವುದಕ್ಕೂ ಮಣಿಯದ ಅಧಿಕಾರಿಗಳು ಪ್ರತಿಯೊಂದು ವಿಭಾಗದಲ್ಲೂ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ್ದಾರೆ.

ಕೆಲವು ಪಬ್ ಮತ್ತು ಕ್ಲಬ್‌ಗಳಲ್ಲಿ ನಿಯಮಬಾಹಿರವಾಗಿ ಅಪ್ರಾಪ್ತರಿಗೆ ಪ್ರವೇಶ ನೀಡಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಅಪ್ರಾಪ್ತರನ್ನು ಒಳಗಡೆ ಬಿಟ್ಟುಕೊಂಡ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ರೀತಿಯಲ್ಲಿ, ನಿಗದಿತ ಡೆಸಿಬಲ್ ಮೀರಿ ಕಿವಿಗಡಚಿಕ್ಕುವ ಶಬ್ದದೊಂದಿಗೆ ಡಿಜೆ/ಸೌಂಡ್ ಸಿಸ್ಟಮ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಗಾಳಿಗೆ ತೂರಿದ ಸ್ಥಳಗಳ ವಿರುದ್ಧವೂ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.

ಪರವಾನಗಿ ನಿಯಮಾವಳಿಗಳು, ನಿಗದಿತ ಸಮಯ ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಕ್ಲಬ್ ಮತ್ತು ಪಬ್‌ಗಳನ್ನು ಪೊಲೀಸರು ಸ್ಥಳದಲ್ಲೇ ಬಾಗಿಲು ಹಾಕಿಸಿದ್ದಾರೆ. ನೂರಾರು ಪೊಲೀಸರು ಏಕಕಾಲದಲ್ಲಿ ರಸ್ತೆಗಿಳಿದಿದ್ದರಿಂದ ಕ್ಲಬ್-ಪಬ್ ಮಾಲೀಕರು ಮತ್ತು ಪಾರ್ಟಿ ಪ್ರಿಯರಲ್ಲಿ ನಡುಕ ಹುಟ್ಟಿದೆ.

ಕಾನೂನು ಪಾಲನೆ ಕಡ್ಡಾಯ
ನಗರದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡುವುದು ಮೊದಲ ಆದ್ಯತೆ. ಎಷ್ಟೇ ಪ್ರಭಾವಿ ವ್ಯಕ್ತಿಗಳ ಸಂಸ್ಥೆಗಳಾಗಿದ್ದರೂ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪರವಾನಗಿ ಷರತ್ತುಗಳನ್ನು ಉಲ್ಲಂಘಿಸುವ, ಅಪ್ರಾಪ್ತರಿಗೆ ಪ್ರವೇಶ ನೀಡುವ ಹಾಗೂ ನಿಗದಿತ ಸಮಯ ಮೀರಿ ವ್ಯವಹರಿಸುವ ಯಾವುದೇ ಅಡ್ಡೆಗಳಿಗೂ ರಿಯಾಯಿತಿ ಇಲ್ಲ ಎಂದು ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಖಡಕ್ ಸಂದೇಶ ರವಾನಿಸಿದ್ದಾರೆ.

ಪರಿಶೀಲನೆ ಮುಕ್ತಾಯಗೊಂಡ ಬಳಿಕ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ಪರವಾನಗಿ ರದ್ದು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.


Spread the love

About Laxminews 24x7

Check Also

ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ

Spread the loveಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ  ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ  ಅವರ ನಡುವಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ