Breaking News

ಮಣಿಪುರ ಕಾಂಗ್ರೆಸ್‌ ಎಂಪಿ, JNU ಫ್ರೊಫೆಸರ್‌ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ

Spread the love

ಬೆಂಗಳೂರು: ಮಣಿಪುರದ ಕಾಂಗ್ರೆಸ್ ಸಂಸದ ಹಾಗೂ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಮೋಲ್ ಅಕೋಯಿಜಮ್ ವಿರುದ್ಧ ಬಿಜೆಪಿಯ ಮಹಿಳಾ ಸದಸ್ಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮುಂಭಾಗ ಜಮಾಯಿಸಿದ ನೂರಾರು ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕೈಯಲ್ಲಿ ಪೋಸ್ಟರ್‌ಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ವಿರೋಧಿ ಕಾಂಗ್ರೆಸ್, ಲೈಂಗಿಕ ಕಿರುಕುಳ ಆರೋಪಿ ಸಂಸದ ರಾಜೀನಾಮೆ ನೀಡಲಿ ಎಂದು ಘೋಷಣೆಗಳನ್ನು ಕೂಗಿದರು.

ರಾಹುಲ್‌ ಗಾಂಧಿ ಅವರು ದೇಶವ್ಯಾಪಿ ಯುವಜರನ್ನು ಸೆಳೆಯಲು ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮ ನಡೆಸಿ ಪಿತೃಪ್ರಭುತ್ವದ ವ್ಯವಸ್ಥೆಯನ್ನು ಒಡೆದು ಹಾಕಿ ಎಂದು ಕರೆ ನೀಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಏನು ಪ್ರತಿಕ್ರಿಯೆ ನೀಡದೇ ಮೌನವಾಗಿರುವುದು ಯಾಕೆ ಎಂದು ಪ್ರಶ್ನಿಸಿದರು.

ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್‌ ಕಚೇರಿಗೆಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಬಿಜೆಪಿಯ ಮಹಿಳಾ ಮೋರ್ಚಾದ ಸದಸ್ಯೆಯರನ್ನು ವಶಕ್ಕೆ ಪಡೆದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಸ್ತೆಯನ್ನು ಬಂದೋಬಸ್ತ್ ಮಾಡಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಕ್ವೀನ್ಸ್ ರಸ್ತೆಯುದ್ದಕ್ಕೂ ಹೆಚ್ಚುವರಿ ಪೊಲೀಸ್ ಪಡೆ, ಕೆಎಸ್‌ಆರ್‌ಪಿ ತುಕುಡಿಗಳನ್ನು ನಿಯೋಜಿಸಲಾಗಿದೆ.

ಏನಿದು ಲೈಂಗಿಕ ದೌರ್ಜನ್ಯ ಆರೋಪ?
ಮೇ ತಿಂಗಳಲ್ಲಿ ಜೆಎನ್‌ಯುನ ಸುಮಾರು 11 ವಿದ್ಯಾರ್ಥಿನಿಯರು ಪ್ರೊ. ಬಿಮೋಲ್ ಅಕೋಯಿಜಮ್ ವಿರುದ್ಧ ಲೈಂಗಿಕ ಕಿರುಕುಳದ ದೂರುಗಳನ್ನು ಸಲ್ಲಿಸಿದ್ದರು. ಪರೀಕ್ಷೆಗಳ ವೈವಾ ಸಮಯದಲ್ಲಿ ಅನುಚಿತ ಹೇಳಿಕೆಗಳನ್ನು ನೀಡುವುದು, ಕ್ಯಾಂಪಸ್‌ನಲ್ಲಿರುವ ತಮ್ಮ ನಿವಾಸಕ್ಕೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅಸಭ್ಯವಾಗಿ ವರ್ತಿಸುವುದು ಮತ್ತು ಹೆಚ್ಚಿನ ಅಂಕಗಳನ್ನು ನೀಡಲು ಲೈಂಗಿಕ ಬೇಡಿಕೆಗಳನ್ನು ಇಟ್ಟಿರುವ ಗಂಭೀರ ಆರೋಪಗಳು ಅವರ ಮೇಲಿವೆ.

ವಿಶ್ವವಿದ್ಯಾಲಯದ ಆಂತರಿಕ ಸಮಿತಿಯು  ನಡೆಸಿದ ತನಿಖೆಯ ವರದಿ ಮತ್ತು ಶಿಫಾರಸಿನ ಆಧಾರದ ಮೇಲೆ, ಜೆಎನ್‌ಯು ಆಡಳಿತ ಮಂಡಳಿಯು ಅಕೋಯಿಜಮ್ ಅವರನ್ನು ಅಕ್ಟೋಬರ್ 9 ರಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿದೆ. ಜೆಎನ್‌ಯುನ ಮುಖ್ಯ ಭದ್ರತಾ ಅಧಿಕಾರಿಯ ದೂರಿನ ಮೇರೆಗೆ, ದೆಹಲಿಯ ವಸಂತ್ ಕುಂಜ್ ನಾರ್ತ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ  ಸೆಕ್ಷನ್ 75 ಮತ್ತು 79 ರ ಅಡಿಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ.

ನಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಬಿಮೋಲ್ ಅಕೋಯಿಜಮ್, ಇದು ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಪಿತೂರಿ  ಎಂದು ಕರೆದಿದ್ದಾರೆ. ವಿಶ್ವವಿದ್ಯಾಲಯವು ತಮಗೆ ತನಿಖಾ ವರದಿಯ ಪ್ರತಿಯನ್ನು ನೀಡದೆ ಮತ್ತು ನಿಯಮಾನುಸಾರ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದೆ ಏಕಪಕ್ಷೀಯವಾಗಿ ವಜಾ ಮಾಡಿದೆ ಎಂದು ಆರೋಪಿಸಿ, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ

Spread the loveಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ  ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ  ಅವರ ನಡುವಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ