ನವದೆಹಲಿ, -ಡೆಡ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಜಾರಿಯಲ್ಲಿರುವ ಬಿಗಿಯಾದ ಲಾಕ್‍ಡೌನ್ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿಯೊಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಇನ್ಸ್‍ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಎಂಬ ಸಂಸ್ಥೆಯು ನಡೆಸಿದ ಜಾಗತಿಕ ಮಟ್ಟದ ಅಧ್ಯಯನದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಂತಹ ಕೆಲ ರಾಜ್ಯಗಳು ಕೈಗೊಂಡಿರುವ ಬಿಗಿ ಲಾಕ್‍ಡೌನ್‍ನಿಂದ ಸೋಂಕು ತಡೆಗಟ್ಟಲು ಸಹಕಾರಿಯಾಗಿದೆ.
ಆದರೆ, ಕೆಲವು ರಾಜ್ಯಗಳು ಇಂತಹ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಶ್ರಮ ವಹಿಸದ ಕಾರಣ ಸಾಂಕ್ರಾಮಿಕ ರೋಗ ಹೆಚ್ಚಾಗಿದೆ ಎಂದು ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಗುಜರಾತ್ ರಾಜ್ಯಗಳನ್ನೂ ಉಲ್ಲೇಖಿಸಿದೆ.
ಈ ಹಿಂದೆ ಅತಿ ಹೆಚ್ಚು ಸೋಂಕು ಪ್ರಕರಣಗಳಲ್ಲಿ ಎರಡನೆ ಸ್ಥಾನದಲ್ಲಿದ್ದ ಕರ್ನಾಟಕ ಅತ್ಯಂತ ಕಠಿಣ ಕ್ರಮ ಕೈಗೊಂಡ ಪರಿಣಾಮ ದೇಶದಲ್ಲಿ 11ನೆ ಸ್ಥಾನ ಪಡೆದಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಅದೇ ರೀತಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕು ವ್ಯಾಪಿಸುವ ಪ್ರಮಾಣ ಅತ್ಯಂತ ಕಡಿಮೆಯಾಗಿದೆ.
ಶಕ್ತಿಶಾಲಿ ರಾಷ್ಟ್ರಗಳು ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಕಡಿಮೆ ಇದೆ ಎಂದು ವಿವಿಧ ದೇಶಗಳ ಅಂಕಿ-ಅಂಶಗಳೊಂದಿಗೆ ಸಂಸ್ಥೆಯು ಹೋಲಿಕೆ ಮಾಡಿದೆ.
ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಶೇ.1.83ರಷ್ಟಿದೆ. ಆದರೆ, ಬೇರೆ ದೇಶಗಳಲ್ಲಿ ಇದೇ ಪ್ರಮಾಣ ಶೇ.4ರಷ್ಟಿದೆ ಎಂದು ಸಂಸ್ಥೆಯ ಅಂಕಿ-ಅಂಶ ತಿಳಿಸಿದೆ.
ಕೇಂದ್ರ ಸರ್ಕಾರ ಕೈಗೊಂಡಿರುವ ಬಿಗಿ ಲಾಕ್‍ಡೌನ್ ಮತ್ತು ಸೀಲ್‍ಡೌನ್ ಕ್ರಮಗಳು ಅನೇಕ ರಾಜ್ಯಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಆದರೆ, ಸೋಂಕು ಮತ್ತು ಸಾವು ಹೆಚ್ಚಾಗಿರುವ ರಾಜ್ಯಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ಸಲಹೆ ಮಾಡಿದೆ.