Breaking News

72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ – ಡಿಕೆಶಿ

Spread the love

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಉದ್ಯೋಗ ನಿಧಿ, AI ವಿಶ್ವವಿದ್ಯಾಲಯ ಹಾಗೂ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವುದಾಗಿ ಸಿಎಂ ಡಿಕೆ ಶಿವಕುಮಾರ್‌ ಅವರು ಭರವಸೆ ನೀಡಿದರು.

ಇಲ್ಲಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಿದ 7.5 ಕೋಟಿ ಕನ್ನಡಿಗರು ಹಾಗೂ ಸಮಸ್ತ ಭಾರತೀಯರಿಗೆ 80ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.

ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಖಾಸಗಿ ಉದ್ಯೋಗಕ್ಕಾಗಿ “ಯುವ ಉದ್ಯೋಗ ಸೇತು” ಹಾಗೂ ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗಗಳಿಗೆ ಮಾಸಿಕ ₹2,500 ಪ್ರೋತ್ಸಾಹಧನ ನೀಡುವ “ಉದ್ಯೋಗ ನಿಧಿ” ಘೋಷಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 6ನೇ ತರಗತಿಯಿಂದಲೇ AI ಶಿಕ್ಷಣ, ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ, ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ.7.5 ವಿಶೇಷ ಮೀಸಲಾತಿ ಹಾಗೂ 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 320 ಲಕ್ಷ ಕೋಟಿಗೆ ಕೊಂಡೊಯ್ಯುವ ಗುರಿ:
ಭಾರತವನ್ನು ಒಂದು ಭವ್ಯ ದೇಗುಲಕ್ಕೆ ಹೋಲಿಸಿದರೆ ರಾಜ್ಯಗಳು ಅದರ ಭದ್ರ ಬುನಾದಿಯ ಕಂಬಗಳಿದ್ದಂತೆ. ಒಕ್ಕೂಟ ತತ್ವವನ್ನು ಮತ್ತಷ್ಟು ಗಟ್ಟಿಗೊಳಿಸೋಣ. ಸ್ವಾತಂತ್ರ್ಯ ಹೋರಾಟಗಾರರು, ಗಡಿ ಕಾಯುವ ವೀರ ಸೈನಿಕರ ತ್ಯಾಗವನ್ನು ಸ್ಮರಿಸುತ್ತಾ, ಕಾಯಕ, ಸಮಾನತೆ ಮತ್ತು ದಾಸೋಹ ತತ್ವಗಳಡಿ ಸರ್ವರನ್ನೂ ಒಳಗೊಂಡ ಆಡಳಿತ ನೀಡುವ ಸಂಕಲ್ಪ ನಮ್ಮ ಸರ್ಕಾರದ್ದು. ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ‘ನವ ಭಾರತ’ ಕಲ್ಪನೆಯಂತೆ “ಯುವ ಕರ್ನಾಟಕ – ನವ ಭಾರತ” ಧ್ಯೇಯದೊಂದಿಗೆ, 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು ₹320 ಲಕ್ಷ ಕೋಟಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಆಡಳಿತವನ್ನು ಜನರ ಮನೆಬಾಗಿಲಿಗೆ ತರಲು ‘ಪ್ರಜಾಸೇವೆ ಇಲಾಖೆ’ ಸ್ಥಾಪಿಸಿ, ಸಚಿವರು ಮತ್ತು ಶಾಸಕರಿಂದ ನಿರಂತರ ಪ್ರಜಾಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಸಾಮಾಜಿಕ ಭದ್ರತೆ ನೀಡುತ್ತಿರುವ ಪಂಚ ಗ್ಯಾರಂಟಿಗಳ ಜೊತೆಗೆ, ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು 6ನೇ ಗ್ಯಾರಂಟಿಯಾಗಿ ‘ಭೂ-ಗ್ಯಾರಂಟಿ’ ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 77,000 ಕೋಟಿ ರೂ.ಗೂ ಅಧಿಕ ಮೊತ್ತ ನೇರ ವರ್ಗಾವಣೆಯಾಗಿದ್ದು, NFHS-6 ವರದಿಯಂತೆ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಶೇ.44 ರಿಂದ ಶೇ.14ಕ್ಕೆ ಇಳಿಕೆಯಾಗಿದೆ. ಶಕ್ತಿ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳು ಕೋಟ್ಯಂತರ ಜನರಿಗೆ ಆಸರೆಯಾಗಿವೆ. ಇದು ಕರ್ನಾಟಕ ಮಾದರಿ ಎಂದೇ ಜನಪ್ರಿಯವಾಗಿದೆ ಹಾಗೂ ಇಡೀ ರಾಷ್ಟ್ರ ಅನುಸರಿಸುತ್ತಿದೆ. ತಾಯಂದಿರ ಮರಣ ಪ್ರಮಾಣದಲ್ಲಿ ಶೇ.19 ರಷ್ಟು ಇಳಿಕೆ ಕಂಡಿದೆ ಎಂದು ಮಾಹಿತಿ ನೀಡಿದರು.

50% ಸಬ್ಸಿಡಿ ನೀಡುವ “ರೈತ ಮಿತ್ರ” ಯೋಜನೆ ಜಾರಿ:
ರೈತರಿಗಾಗಿ ಡ್ರೋನ್ ಆಧಾರಿತ ಬೆಳೆ ಸಮೀಕ್ಷೆಯ “ಮುಖ್ಯಮಂತ್ರಿ ರೈತ ಚೈತನ್ಯ” ಮತ್ತು ಸಣ್ಣ ರೈತರಿಗೆ ಯಂತ್ರೋಪಕರಣಗಳ ಬಾಡಿಗೆ ಮೇಲೆ 50% ಸಬ್ಸಿಡಿ ನೀಡುವ “ರೈತ ಮಿತ್ರ” ಯೋಜನೆ ಜಾರಿಗೊಳಿಸಲಾಗುವುದು. ಎತ್ತಿನಹೊಳೆ ಯೋಜನೆಯ ಮೊದಲ ಹಂತ ಹಾಗೂ 16,000 ಕೋಟಿ ರೂ. ಮೊತ್ತದ ಜಲಸಂಪನ್ಮೂಲ ಯೋಜನೆಗಳು ಚಾಲನೆಯಲ್ಲಿವೆ. ಎಸ್‌ಸಿ/ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಬೃಹತ್ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

26,000 ಕೋಟಿ ರೂ. ವೆಚ್ಚದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್:
ಬೆಂಗಳೂರಿಗೆ 1.50 ಲಕ್ಷ ಕೋಟಿ ರೂ. ಮೂಲಸೌಕರ್ಯ, 26,000 ಕೋಟಿ ರೂ. ವೆಚ್ಚದ 117 ಕಿ.ಮೀ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’, 5 ಹೊಸ ಪೊಲೀಸ್ ಕಮಿಷನರೇಟ್‌ಗಳು, ಆ್ಯಂಟಿ ರೌಡಿ ಸ್ಕ್ವಾಡ್, ಲಾಲ್‌ಬಾಗ್ ಮಾದರಿಯ 5 ಬೃಹತ್ ಟ್ರೀ ಪಾರ್ಕ್‌ಗಳು ಹಾಗೂ 7 ಕೆರೆಗಳ ಪುನಃಶ್ಚೇತನ ಕೈಗೆತ್ತಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರದಲ್ಲಿ 20,000 ಕೋಟಿ ರೂ. ವೆಚ್ಚದ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್, ‘ಬಿಯಾಂಡ್ ಬೆಂಗಳೂರು’ ಅಡಿ 5 ಜಿಲ್ಲೆಗಳಲ್ಲಿ ಗ್ಲೋಬಲ್ ಟೆಕ್ ಸೆಂಟರ್‌ಗಳು ಮತ್ತು ‘ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ’ ಸ್ಥಾಪಿಸಲಾಗುತ್ತಿದೆ. ರಾಜ್ಯದ ಪ್ರತಿಯೊಂದು ಪಟ್ಟಣ ಹಾಗೂ ನಗರದ ಪ್ರಗತಿಗೆ ರಿಂಗ್‌ ರೋಡ್ ಹಾಗೂ ಮೊಬಿಲಿಟಿ ಗ್ರಿಡ್‌ ಗಳನ್ನು ನಗರ ಯೋಜನೆಯ ಮೂಲಕ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

16,000 ಕೋಟಿ ವೆಚ್ಚದ 112 ಜಲಸಂಪನ್ಮೂಲ ಯೋಜನೆಗಳಿಗೆ ಅನುಮೋದನೆ:
ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕುಡಿಯುವ ನೀರು ಮತ್ತು ಮೇವಿನ ಕೊರತೆ ನೀಗಿಸಲು ವಿಭಾಗ ಮಟ್ಟದಲ್ಲಿ ತುರ್ತು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಅಂತರ್ಜಲ ವೃದ್ಧಿಗೆ ಕೆರೆಗಳ ರಕ್ಷಣೆಯ ಯೋಜನೆ ಜಾರಿಯಲ್ಲಿದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬದ್ಧತೆ ವ್ಯಕ್ತಪಡಿಸಿರುವ ಸರ್ಕಾರ, 16,000 ಕೋಟಿ ರೂ. ವೆಚ್ಚದ 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ಅನುಮೋದನೆ ನೀಡಿದೆ. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಮೊದಲ ಹಂತ ಮುಕ್ತಾಯದ ಹಂತದಲ್ಲಿದ್ದು, ನವೆಂಬರ್ ವೇಳೆಗೆ ತುಮಕೂರಿಗೆ ನೀರು ತಲುಪಲಿದೆ


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ