Breaking News

Navratri Day 3: ಚಂದ್ರಘಂಟಾ ದೇವಿ ಯಾರು? ಪುರಾಣ ಕಥೆ ಏನು ಹೇಳುತ್ತೆ?

Spread the love

ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ದುರ್ಗಾದೇವಿಯ ಒಂಭತ್ತು ಅವತಾರಗಳಲ್ಲಿ ಚಂದ್ರಘಂಟಾ ಅವತಾರವೂ ಒಂದಾಗಿದೆ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಚಂದ್ರಘಂಟಾ ದೇವಿ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತದೆ. ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟಾ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.

ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂದರ್ಥ. ಚಂದ್ರಘಂಟಾ ದೇವಿಯ ಮೂರನೇ ಕಣ್ಣು ತೆರೆದೇ ಇರುತ್ತದೆ. ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟಾ ದೇವಿಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

ಚಂದ್ರಘಂಟಾ ದೇವಿ ಯಾರು?
ಚಂದ್ರಘಂಟ ದೇವಿಯು ಶುಕ್ರ ಗ್ರಹದ ಅಧಿದೇವತೆಯಾಗಿದ್ದಾಳೆ. ಈಕೆ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು.

ಹಿನ್ನೆಲೆ ಏನು?
ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ನೋಡಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

ಪೂಜೆಯ ಮಹತ್ವ:
ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುತ್ತದೆ. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟಾ ನಾದವು ಋಣಾತ್ಮಕ ಶಕ್ತಿಯನ್ನು ಹೊಂದಿದ್ದು, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು. ಹಾಗಾಗಿ ಚಂದ್ರಘಂಟಾ ದೇವಿಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆಶುದ್ಧಿಯಾಗುವುದು.

ಯಾರು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ವ್ಯವಹಾರದಲ್ಲಿ ಹೊಸ ಹಾದಿಯನ್ನು ತುಳಿಯಲು ಇಚ್ಛಿಸುತ್ತಾರೋ ಅವರು ಚಂದ್ರಘಂಟಾ ದೇವಿಯ ಪೂಜೆ ಮಾಡಿದರೆ ಅವರು ಸಾಗುವ ದಾರಿಯಲ್ಲಿ ಬೆಳಕನ್ನು ಚೆಲ್ಲಿ, ಯಶಸ್ಸಿನ ಮೆಟ್ಟಿಲೇರಲು ಸಹಕರಿಸುತ್ತಾಳೆ ತಾಯಿ ಚಂದ್ರಘಂಟಾ ದೇವಿ.


Spread the love

About Laxminews 24x7

Check Also

ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ

Spread the loveಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ  ಹಾಗೂ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ  ಅವರ ನಡುವಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ