Breaking News

ನನ್ನ ರಾಜಕೀಯ ಮುಗಿಯಿತು.. ನೀವು ಮೈ ಮರೆತರೆ ನಿಮ್ಮ ರಾಜಕೀಯದ ಮಾರಣಹೋಮ ನಿಶ್ಚಿತ: ಸಿದ್ದರಾಮಯ್ಯ

Spread the love

ಮೈಸೂರು: ನನ್ನ ರಾಜಕೀಯ ಜೀವನ ಮುಗಿದಿದೆ. ನಿಮ್ಮ ರಾಜಕೀಯ ಭವಿಷ್ಯ ಉತ್ತಮವಾಗಿರಬೇಕಾದರೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ. ಇಲ್ಲದೆ ಇದ್ದರೆ ನಿಮ್ಮ ರಾಜಕೀಯ ಮಾರಣಹೋಮ ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಮೈಸೂರಿನಲ್ಲಿ ನಡೆದ SIR ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗ ಇಲ್ಲದಂತಾಗಿದೆ. ಬಿಜೆಪಿ ನೇತೃತ್ವದಲ್ಲಿ ದುರಾಡಳಿತ ನಡೆಯುತ್ತಿದೆ ಎಂದು ಆರೋಪಿಸಿದರು.

ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿರುವ ಬಿಜೆಪಿ, ದೇಶದಲ್ಲಿ ಸರ್ವಾಧಿಕಾರ ಸ್ಥಾಪಿಸಲು ಹೊರಟಿದೆ. ಶೂದ್ರರು ಬಿಜೆಪಿ ಜೊತೆ ಹೋಗಬಾರದು. ಬಿಜೆಪಿ ಶೂದ್ರರ ವಿರೋಧಿ. ಸುಳ್ಳನ್ನು ಮಾರಾಟ ಮಾಡುವ ಸುಳ್ಳಿನ ಕಾರ್ಖಾನೆ ಬಿಜೆಪಿ. ಅಧಿಕಾರಕ್ಕಾಗಿ ಬಿಜೆಪಿ ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಚ್ಚರ ತಪ್ಪಿದರೆ ಬಿಜೆಪಿ ನಿಮ್ಮನ್ನು ರಾಜಕೀಯವಾಗಿ ಮುಗಿಸುತ್ತದೆ. ಒಂದು ತಿಂಗಳು ಮೈಮರೆತರೂ ನಿಮ್ಮ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಾಂಗ್ರೆಸ್ ನಾಯಕರು, ಶಾಸಕರು ಹಾಗೂ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.

ಎಸ್‌ಐಆರ್‌ ಹೊಸ ಪ್ರಕ್ರಿಯೆಯಲ್ಲ. 1952ರಿಂದಲೇ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಾ ಬಂದಿದೆ. ಆದರೆ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲ ಎಂದು ಹೇಳಿದರು. 2014ರ ಬಳಿಕ “ಮತ ದ್ರೋಹ” ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ಗೆ ಮತ ಹಾಕುವ ಬಡವರು, ರೈತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿ ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಬಿಜೆಪಿ ಕೇವಲ 36 ಶೇಕಡಾ ಮತಗಳನ್ನು ಪಡೆದಿದ್ದು, ಉಳಿದ 64 ಶೇಕಡಾ ಜನರು ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ. ಆ ಮತಗಳನ್ನೇ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಜೂನ್‌ 30ರಿಂದ ಜುಲೈ 29ರವರೆಗೆ ನಡೆಯಲಿರುವ ಎಸ್‌ಐಆರ್‌ ಅವಧಿಯಲ್ಲಿ ಕಾಂಗ್ರೆಸ್‌ನ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಬಿಎಲ್‌ಒಗಳ ಜೊತೆ ಸಮನ್ವಯ ಸಾಧಿಸಿ ಮನೆ ಮನೆಗೆ ಭೇಟಿ ನೀಡಬೇಕು. ಪ್ರತಿ ಬೂತ್‌ಗೆ ಇಬ್ಬರು ಸ್ಥಳೀಯ ಮತದಾರರನ್ನು ಆಯ್ಕೆ ಮಾಡಿ, ಎನ್ಯೂಮರೇಷನ್‌ ಫಾರ್ಮ್‌ಗಳನ್ನು ಸರಿಯಾಗಿ ಭರ್ತಿ ಮಾಡಿ ಸ್ವೀಕೃತಿ ದೃಢೀಕರಣ ಪಡೆಯಬೇಕು ಎಂದು ಸೂಚಿಸಿದರು.

ಇದೇ ವೇಳೆ ಬಿಜೆಪಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಪ್ರಜಾಪ್ರಭುತ್ವವನ್ನು ಉಳಿಸಲು ಎಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು. ಮುಂದಿನ ಒಂದು ತಿಂಗಳು ಬೇರೆ ಎಲ್ಲ ಕೆಲಸಗಳಿಗಿಂತ ಎಸ್‌ಐಆರ್‌ ಪ್ರಕ್ರಿಯೆಯ ಮೇಲೆಯೇ ಹೆಚ್ಚಿನ ಗಮನ ಹರಿಸಬೇಕು. ಒಬ್ಬನೇ ಒಬ್ಬ ಅರ್ಹ ಮತದಾರ ಕೂಡ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.


Spread the love

About Laxminews 24x7

Check Also

ನಾಟಿ ಕೋಳಿ, ಮುದ್ದೆ, ಚಿಕನ್‌ ಚಾಪ್ಸ್‌ – ಬಾಯಿ ಚಪ್ಪರಿಸಿ ತಿಂದ ಸಿದ್ರಾಮಯ್ಯ

Spread the loveಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಇಂದು ಭರ್ಜರಿ ಬಾಡೂಟ ಸವಿದರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ