ಭೋಪಾಲ್: ಮಧ್ಯಪ್ರದೇಶದಲ್ಲಿ ಕಳೆದ 17 ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಗೆ ಮತ್ತಷ್ಟು ತಿರುವು ಸಿಕ್ಕಂತಾಗಿದೆ. ಮುಖ್ಯಮಂತ್ರಿ ಕಮಲ್ ನಾಥ್ ರಾಜ್ಯಪಾಲರಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಭೋಪಾಲ್‍ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಧ್ಯಪ್ರದೇಶದ ವಿಧಾನಸಭೆಯ ಫಲಿತಾಂಶವು 11 ಡಿಸೆಂಬರ್ 2018 ರಂದು ಬಂದಿತ್ತು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವಾಗಲೂ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದ್ದೇನೆ. ರಾಜ್ಯದಲ್ಲಿ ಬಿಜೆಪಿಗೆ 15 ವರ್ಷಗಳ ಕಾಲ ಅಧಿಕಾರ ಸಿಕ್ಕಿತ್ತು. ಈಗ ನಾನು 15 ತಿಂಗಳು ಮಾತ್ರವೇ ಅಧಿಕಾರ ನಡೆಸಿದ್ದೇನೆ. ಈ ಮಧ್ಯೆ ಲೋಕಸಭಾ ಚುನಾವಣೆ ಮತ್ತು ನೀತಿ ಸಂಹಿತೆಗೆ ಎರಡೂವರೆ ತಿಂಗಳು ಹೋಯಿತು. ಬಿಜೆಪಿ ನಾಯಕರು ಅಸಹ್ಯವಾಗಿ ನನ್ನ ವಿರುದ್ಧ ಸಂಚು ಹೂಡುತ್ತಿದ್ದರು. ಒಂದು ತಿಂಗಳಲ್ಲಿ ನಮ್ಮ ಸರ್ಕಾರ ರಚನೆಯಾದಾಗ, ಪ್ರತಿ 15 ದಿನಗಳಿಗೊಮ್ಮೆ ಬಿಜೆಪಿ ನಾಯಕರು ಈ ಸರ್ಕಾರ ಹದಿನೈದು ದಿನಗಳ, ಇಲ್ಲವೇ ತಿಂಗಳ ಸರ್ಕಾರ ಎಂದು ಹೇಳುತ್ತಿದ್ದರು ಎಂಬುದು ನಿಮಗೆಲ್ಲರಿಗೂ ತಿಳಿದಿದೆ ಎಂದರು.