ಚಿಕ್ಕೋಡಿ: ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಗೋಟುರ ರಾಜ್ಯ ರಸ್ತೆಯ ದುಸ್ಥಿತಿಗೆ ಮುಕ್ತಿ ಹಾಡಿದ್ದಾರೆ.
ಹೌದು…ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದ ಭರವಸೆಯಂತೆ ಕೇವಲ ನಾಲ್ಕೇ ದಿನಗಳಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಮೂಲಕ, ಅಭಿವೃದ್ಧಿ ಕೆಲಸಗಳಲ್ಲಿ ತಮಗೆ ತಾವೇ ಸಾಟಿ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹದಗೆಟ್ಟ ರಸ್ತೆಗೆ ದುರಸ್ತಿ ಭಾಗ್ಯ: ಪ್ರಯಾಣಿಕರು ಮತ್ತು ಸಾರ್ವಜನಿಕರು ಸಂಚರಿಸಲು ಪ್ರತಿನಿತ್ಯ ನರಕಯಾತನೆ ಪಡುತ್ತಿದ್ದ ಗೋಟೂರು ರಸ್ತೆಯನ್ನು ದುರಸ್ತಿ ಪಡಿಸಿಲು ಸಂಸದೆ ಪ್ರಿಯಂಕಾ ಜಾರಕಿಹೊಳಿ ಸೂಚನೆ ಮೇರೆಗೆ ಅಧಿಕಾರಿಗಳು ಈಗ ಮುಂದಾಗಿದ್ದಾರೆ. ಗೋಟುರು ರಾಜ್ಯ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳಿಂದಾಗಿ ಸಾರ್ವಜನಿಕರು, ವಾಹನ ಓಡಾಟಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಇತ್ತೀಚೆಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರು. ಇಲ್ಲಿರುವ ಸಮಸ್ಯೆಯನ್ನು ಅರಿತ ಸಂಸದೆ ಪ್ರಿಯಂಕಾ ಅವರು ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಾಥಮಿಕತೆಯ ಆಧಾರದಲ್ಲಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿ ನುಡಿದಂತೆ ನಡೆದಿದ್ದಾರೆ.
ನುಡಿದಂತೆ ನಡೆದ ಸಂಸದೆ: ನಾಲ್ಕು ದಿನಗಳ ಹಿಂದೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೋಟುರ ರಾಜ್ಯ ರಸ್ತೆಯ ಹದಗೆಟ್ಟ ಸ್ಥಿತಿಯ ಬಗ್ಗೆ ಸಾರ್ವಜನಿಕರು ಮತ್ತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸ್ಪಂದಿಸಿದ್ದ ಅವರು, 3-4 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಮಾತು ನೀಡಿದ್ದರು. ಅದರಂತೆ ಕೂಡಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚುರುಕು ಮುಟ್ಟಿಸಿದ ಪರಿಣಾಮವಾಗಿ, ಇಂದು ರಸ್ತೆ ಕಾಮಗಾರಿ ಅಧಿಕೃತವಾಗಿ ಆರಂಭಗೊಂಡಿದೆ.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಎಂಪಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿನ ಗುಂಡಿಗಳಿಂದಾಗಿ ಸಂಭವಿಸುತ್ತಿದ್ದ ಅಪಘಾತಗಳಿಗೆ ಈಗ ಬ್ರೇಕ್ ಬೀಳಲಿದೆ. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಬೇಕೆಂದು ಸಂಸದರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಸಂಸದರ ಈ ಕ್ಷಿಪ್ರ ಕ್ರಮಕ್ಕೆ ಗೋಟುರ ಗ್ರಾಮಸ್ಥರು ಹಾಗೂ ಚಿಕ್ಕೋಡಿ ಕ್ಷೇತ್ರದ ಜನತೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿವೃದ್ಧಿಪರ ನಾಯಕತ್ವಕ್ಕೆ ಇದು ಸಾಕ್ಷಿ ಎಂದು ಬಣ್ಣಿಸಿದ್ದಾರೆ.
Laxmi News 24×7