ಕೋಲಾರ: ನಿತ್ಯ ತರ್ಲೆ ಮಾಡೋ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಈ ಕೋತಿಗಳ ಆರೋಗ್ಯದಲ್ಲಾದ ಏರು ಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಕೊರೊನಾ ಆತಂಕದ ನಡುವೆ ಕೋತಿಗಳು ಮಂಕಾಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕೋಡುಗುರ್ಕಿ ಗ್ರಾಮದಲ್ಲಿ ಮಂಗಗಳು ಈ ರೀತಿ ವರ್ತಿಸುತ್ತಿದ್ದು, ಕೆಲವು ನಿತ್ರಾಣವಾಗಿ ಮಲಗಿದರೆ, ಇನ್ನೂ ಕೆಲವು ಏಳಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಿವೆ. ಇನ್ನೂ ಹಲವು ಕೋತಿಗಳು ಕೆಮ್ಮುತ್ತಿವೆ. ಇದೆಲ್ಲವನ್ನೂ ಗ್ರಾಮಸ್ಥರು ಆತಂಕದಿಂದ ನೋಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಾಗಿದ್ದರೆ ಗ್ರಾಮಸ್ಥರು ತೆಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಕೊರೊನಾ ಮಹಾಮಾರಿ ಒಕ್ಕರಿಸಿರುವ ಸಂದರ್ಭದಲ್ಲಿ ಕೋತಿಗಳು ಈ ರೀತಿ ಮಾಡುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ.
ಕೋಡುಗುರ್ಕಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಈ ಕೋತಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೋತಿಗಳ ಹಾವ ಭಾವಗಳನ್ನ ಕಂಡ ಗ್ರಾಮಸ್ಥರು ಕೋತಿಗಳಿಗೂ ಕೊರೊನಾ ವೈರಸ್ ಹರಡಿದಿಯಾ ಎಂದು ಆತಂಕಗೊಂಡಿದ್ದಾರೆ. ಇದರ ನಡುವೆಯೂ ಕೋತಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ಗ್ರಾಮದಲ್ಲಿರುವ ನೂರಾರು ಕೋತಿಗಳಲ್ಲಿ ಕೆಲವೊಂದು ರೋಗ ಲಕ್ಷಣಗಳು ಗೋಚರವಾಗಿವೆ. ಇಲ್ಲಿರುವ ಹೆಚ್ಚಿನ ಸಂಖ್ಯೆಯ ಕೋತಿಗಳು ಕೆಮ್ಮುವುದು, ಎಲ್ಲಂದರಲ್ಲಿ ನಿತ್ರಾಣವಸ್ಥೆಯಲ್ಲಿ ಮಲಗುವುದು, ಸುಸ್ತಾಗಿ ಬೀಳುವುದು. ಜನರು ಏನಾದರೂ ಆಹಾರ ಕೊಟ್ಟರೂ ತಿನ್ನದೆ ಇರೋದು ಹೀಗೆ ವರ್ತಿಸುತ್ತಿರುವ ಕೋತಿಗಳು ರಾತ್ರಿಯೆಲ್ಲಾ ಕೆಮ್ಮುತ್ತಿರುತ್ತವಂತೆ.
ಕೋಲಾರದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ನೆಮ್ಮದಿಯಿಂದಿರುವ ಜನರು, ಇದೀಗ ಕೋತಿಗಳ ರೋಗ ಲಕ್ಷಣ ಕಂಡು ಮೈಸೂರು ಹಾಗೂ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಏನಾದ್ರು ಕಾಣಿಸಿಕೊಂಡಿತಾ ಅಥವಾ ಕೊರೊನಾ ವೈರಸ್ಸೇ ಹಬ್ಬಿತಾ ಎಂಬ ಆಂತಂಕದಲ್ಲಿದ್ದಾರೆ. ಈ ಕುರಿತು ಸ್ಥಳೀಯ ಪಂಚಾಯಿತಿ ಪಿಡಿಓ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಗ್ರಾಮಕ್ಕೆ ಬಂದಿರುವ ಅರಣ್ಯ ಇಲಾಖೆ, ಆರೋಗ್ಯ ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ಕೋತಿಗಳ ಪರಿಶೀಲನೆಯಲ್ಲಿ ತೊಡಗಿದೆ.