ಬೆಂಗಳೂರು: ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ.
ಅಕ್ರಂ ಪಾಷಾ (43) ಕೊಲೆಯಾದ ವ್ಯಕ್ತಿ. ಉಮರ್ ಖಾಲೀದ್ ಎಂಬವರ ಪತ್ನಿಯ ಜೊತೆ ಅಕ್ರಂನ ಪಾಷಾ ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಬುಧವಾರ ರಾತ್ರಿ ಅಕ್ರಂ ಪಾಷಾ ಉಮರ್ ಖಾಲಿದ್ ಮನೆ ಬಳಿ ಬಂದಿದ್ದ. ಈ ವೇಳೆ ಉಮರ್ ಖಾಲಿದ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕೊಲೆ ಪ್ರಕರಣ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಪ್ರತಿಕ್ರಿಯಿಸಿ, ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುಮಾರು 12:30ಕ್ಕೆ ಹಲ್ಲೆ ಆಗಿದೆ ಎಂದು ಮಾಹಿತಿ ಬಂದಿದೆ. ಮಾಹಿತಿ ಆಧರಿಸಿ ಪೊಲೀಸ್ ಹೋಗಿ ನೋಡಿದಾಗ ಓರ್ವ ವ್ಯಕ್ತಿ ಮೇಲೆ ಹಲ್ಲೆ ಆಗಿರುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಕ್ರಂ ಪಾಷಾ ಮೃತಪಟ್ಟಿದ್ದಾನೆ ಎಂದಿದ್ದಾರೆ.
ಅಕ್ರಂ ಪಾಷಾ ಹಾಗೂ ಉಮರ್ ಖಾಲಿದ್ ಕಾರು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಕ್ರಮ ಸಂಬಂಧ ವಿಚಾರವಾಗಿ ಆರೋಪಿ ಅಕ್ರಂ ಪಾಷಾ ಮೇಲೆ ಹಲ್ಲೆ ಮಾಡಿದ್ದ. ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪೂರ್ತಿ ತನಿಖೆ ಆದಮೇಲೆ ನಿಖರ ಕಾರಣ ತಿಳಿದು ಬರಲಿದೆ. ಆರೋಪಿ ಹೆಂಡತಿಗೂ ಮೃತನಿಗೂ ಸಂಬಂಧವಿತ್ತು. ಅದೇ ವಿಚಾರಕ್ಕೆ ಗಲಾಟೆಯಾಗಿದೆ ಎಂಬ ಮಾಹಿತಿ ಇದೆ. ಆರೋಪಿ ಉಮರ್ ಖಾಲೀದ್‌ನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಯತೀಶ್ ತಿಳಿಸಿದ್ದಾರೆ.
Laxmi News 24×7