ಬೆಂಗಳೂರು: ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಸರ್ಕಾರಿ ನಿವಾಸ ಹಂಚಿಕೆ ವಿಚಾರವಾಗಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮತ್ತು ತನ್ನ ಮಧ್ಯೆ ಕಿತ್ತಾಟ ನಡೆಯುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬೈರತಿ ಸುರೇಶ್ ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ. ಮನೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಖಾಲಿ ಇದ್ದ ಕಾರಣ ಆ ಮನೆಯನ್ನು ನನಗೆ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ವಿವಾದವೇನಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.
ಮಹದೇವಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಹೇಳಿದ ಸುರೇಶ್, ನಾನು ಮಹದೇವಪ್ಪಣ್ಣ ಅವರ ಮನೆಗೆ ನೂರು ಸಲ ಹೋಗಿ ಊಟ ಮಾಡಿದ್ದೇನೆ. ಅವರು ನನ್ನ ಸ್ನೇಹಿತರಲ್ಲ, ನನಗಿಂತ ದೊಡ್ಡವರು, ಅವರ ಮುಂದೆ ನಾನು ಮಗನ ಸಮಾನ ಎಂದರು.
ಮನೆಯ ಗೋಡೆ ಒಡೆಸಿದ್ದು ನಾನಲ್ಲ, ಅದು ನನ್ನ ಮನೆಯೂ ಅಲ್ಲ, ಸಂಬಂಧಪಟ್ಟ ಇಲಾಖೆಯವರು ಮಾಡಿರುವ ಕೆಲಸ. ಕಳೆದ ತಿಂಗಳು 15ನೇ ತಾರೀಖಿಗೆ ಮನೆ ಖಾಲಿ ಮಾಡಲಾಗಿದೆ ಎಂದು ಪತ್ರ ಬಂದಿತ್ತು. ಇದೀಗ ಮಹದೇವಪ್ಪಣ್ಣ ಅವರೇ ಆ ಮನೆಯಲ್ಲಿ ಮುಂದುವರಿಯುವುದಾದರೆ ನನಗೇನೂ ಅಭ್ಯಂತರವಿಲ್ಲ ಎಂದು ಹೇಳಿದರು.
ಸಿಎಂ ಅವರು ಅವರನ್ನೇ ಮುಂದುವರಿಯಲು ಸೂಚಿಸಿದರೆ, ಉಳಿದ ಒಂದೂಮುಕ್ಕಾಲು ವರ್ಷ ಅವರೇ ಇರಲಿ, ನನ್ನ ತಕರಾರಿಲ್ಲ. ಅವರು ಅಂಬೇಡ್ಕರ್ ಅನುಯಾಯಿ, ನಾನೂ ಅಂಬೇಡ್ಕರ್ ಅನುಯಾಯಿ ಎಂದರು.
Laxmi News 24×7