Breaking News

ಡ್ಯೂಪ್ಲಿಕೇಟ್ ಕೀ ಬಳಸಿ ಐಷಾರಾಮಿ ಕಾರುಗಳ ಕಳ್ಳತನ – ಕರ್ನಾಟಕದಿಂದ ರಾಜಸ್ಥಾನವರೆಗೆ ‘ಕಾರ್‌ ಕಳ್ಳರ’ ಜಾಲ; ಇಬ್ಬರು ಅರೆಸ್ಟ್‌

Spread the love

ಬೆಂಗಳೂರು: ಡ್ಯೂಪ್ಲಿಕೇಟ್ ಕೀ ಹಾಗೂ ಅತ್ಯಾಧುನಿಕ ಉಪಕರಣಗಳನ್ನ ಬಳಸಿ ದೇಶದ ವಿವಿಧೆಡೆ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡಿ, ರಾಜಸ್ಥಾನದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಮತ್ತೊಂದು ರಾಜ್ಯದ ಮಹಿಳೆಯೂ ಸೇರಿದ್ದಾಳೆ. ಆರೋಪಿಗಳಿಂದ 35 ಲಕ್ಷ ರೂ. ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನ ರಾಜಸ್ಥಾನದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೋಟೆಲ್ ಪಾರ್ಕಿಂಗ್‌ನಿಂದ ಫಾರ್ಚುನರ್ ನಾಪತ್ತೆ!
ಈ ಪ್ರಕರಣದ ಸುಳಿವು ಸಿಕ್ಕಿದ್ದು ಜೂನ್ 27ರಂದು. ಚೆನ್ನೈ ಮೂಲದ ವ್ಯಕ್ತಿಯೊಬ್ಬರು ವಾರಾಂತ್ಯ ಪ್ರವಾಸಕ್ಕಾಗಿ ಜೂನ್ 26ರಂದು ಬೆಂಗಳೂರಿಗೆ ಬಂದಿದ್ದರು. ರಾತ್ರಿ ಸಿನಿಮಾ ವೀಕ್ಷಿಸಿ ಸುಮಾರು 1.30ರ ವೇಳೆಗೆ ಸಿಂಗಸಂದ್ರದ ಹೋಟೆಲ್ ಪಾರ್ಕಿಂಗ್‌ನಲ್ಲಿ ತಮ್ಮ ಟೊಯೋಟಾ ಫಾರ್ಚುನರ್ ಕಾರನ್ನು ನಿಲ್ಲಿಸಿದ್ದರು. ಆದರೆ ಬೆಳಗ್ಗೆ ನೋಡಿದಾಗ ಕಾರು ನಾಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಕಾರು ಕಳ್ಳತನದ ಹಿಂದೆ ವ್ಯವಸ್ಥಿತ ಜಾಲವಿರುವುದು ಬೆಳಕಿಗೆ ಬಂದಿದೆ.

ಬೆನ್ನಟ್ಟಿದ ಪೊಲೀಸರಿಗೆ ಸಿಕ್ಕಿದ್ದು ಮೊದಲ ಸುಳಿವು!
ತನಿಖೆ ಮುಂದುವರಿಸಿದ ಪೊಲೀಸರು ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಿ, ಜುಲೈ 4ರಂದು ಬೆಳಗಾವಿ–ಪುಣೆ ರಾಷ್ಟ್ರೀಯ ಹೆದ್ದಾರಿಯ ಕರಾಡ್ ಸಮೀಪ ಅವರನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಪ್ರಮುಖ ಆರೋಪಿ ಕದ್ದ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಆದರೆ ಆತನ ಮಹಿಳಾ ಸಹಚರಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಚಾರಣೆ ವೇಳೆ ಮಹಿಳೆ ನೀಡಿದ ಮಾಹಿತಿ ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ತ್ವರಿತವಾಗಿ ಹಣ ಸಂಪಾದಿಸುವ ಉದ್ದೇಶದಿಂದ ದುಬಾರಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ಆಕೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ .

ಡ್ಯೂಪ್ಲಿಕೇಟ್ ಕೀ… ಕಳ್ಳರ ಪ್ರಮುಖ ಅಸ್ತ್ರ!
ಜುಲೈ 17ರಂದು ವಿಶೇಷ ಪೊಲೀಸ್ ತಂಡ ಪ್ರಮುಖ ಆರೋಪಿಯನ್ನು ಸಿಲ್ಕ್ ಬೋರ್ಡ್ ಬಳಿ ಬಂಧಿಸಿದೆ. ವಿಚಾರಣೆ ವೇಳೆ ಆತ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡಲು ಅತ್ಯಾಧುನಿಕ ಉಪಕರಣಗಳ ನೆರವಿನಿಂದ ತಯಾರಿಸಿದ ಡ್ಯೂಪ್ಲಿಕೇಟ್ ಕೀಗಳನ್ನು ಬಳಸುತ್ತಿದ್ದ ಎನ್ನಲಾಗಿದೆ. ಕದ್ದ ಕಾರುಗಳನ್ನು ರಾಜಸ್ಥಾನದ ಬಾರ್ಮೇರ್, ಬಾಲೋತ್ರಾ ಸೇರಿದಂತೆ ಮರುಭೂಮಿ ಪ್ರದೇಶಗಳಲ್ಲಿರುವ ಪರಿಚಿತರಿಗೆ ಮಾರಾಟ ಮಾಡುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊನೆಗೂ ಪತ್ತೆಯಾಯ್ತು 35 ಲಕ್ಷದ ಫಾರ್ಚುನರ್!
ಆರೋಪಿಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಪೊಲೀಸರು ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಜುಲೈ 24ರಂದು ಧೋರಿಮಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲೆಟಿ ಪ್ರದೇಶದಲ್ಲಿ ಕದ್ದೊಯ್ಯಲಾಗಿದ್ದ ಟೊಯೋಟಾ ಫಾರ್ಚುನರ್ ಕಾರನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಕಾರಿನ ಅಂದಾಜು ಮೌಲ್ಯ ಬರೋಬ್ಬರಿ 35 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

21 ಪ್ರಕರಣಗಳಲ್ಲಿ ಆರೋಪಿಗಳ ಹೆಸರು!
ಪೊಲೀಸರ ಪ್ರಕಾರ, ಬಂಧಿತ ಪ್ರಮುಖ ಆರೋಪಿ ವಿರುದ್ಧ ಬೆಂಗಳೂರು, ಹೈದರಾಬಾದ್, ರಾಜಸ್ಥಾನ ಮತ್ತು ತಮಿಳುನಾಡು ಸೇರಿದಂತೆ ವಿವಿಧೆಡೆ ಈಗಾಗಲೇ 21 ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಇದು ಒಂದೇ ಕಾರಿನ ಕಳ್ಳತನವಲ್ಲ, ಹಲವು ರಾಜ್ಯಗಳಿಗೆ ವ್ಯಾಪಿಸಿದ್ದ ಕಾರು ಕಳ್ಳತನದ ಜಾಲದ ಭಾಗವಾಗಿರಬಹುದು ಎಂಬ ಅನುಮಾನ ಮೂಡಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಈ ಕಾರ್ಯಾಚರಣೆಯನ್ನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು ಡಿಸಿಪಿ ಎಂ. ನಾರಾಯಣ್ ಮತ್ತು ಎಸಿಪಿ ಸತೀಶ್ ಆರ್. ಅವರ ಮೇಲ್ವಿಚಾರಣೆಯಲ್ಲಿ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನವೀನ್ ಕುಮಾರ್ ಪಿ.ಜಿ. ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ