ನವದೆಹಲಿ ಏ.8. ಇಂದು ವಿಡಿಯೋ ಕಾನ್ಫೆರೆನ್ಸ್ ನಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಸಂವಾದ ನಡೆಸಿದ ಮೋದಿ ಏಪ್ರಿಲ್ 14ರಂದು ದೇಶಾದ್ಯಂತ ಲಾಕ್ಡೌನ್ ರದ್ದುಪಡಿಸುವ ಯಾವುದೇ ಪ್ರಶ್ನೆ ಇಲ್ಲ ಎಂದು ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ.
ತಕ್ಷಣಕ್ಕೆ ಲಾಕ್ಡೌನ್ ಹಿಂಪಡೆಯುವ ಆಲೋಚನೆ ಇಲ್ಲ ಆದರೆ ನಾಗರೀಕರಿಗೆ ಸ್ವಲ್ಪಮಟ್ಟಿನ ರಿಲೀಫ್ ನೀಡುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸರ್ವ ಪಕ್ಷ ಸಭೆ ಇಂದು ವಿಪಕ್ಷ ನಾಯಕರು ನೀಡಿದ ಸಲಹೆಗಳನ್ನು ಆಲಿಸಿದ ನಂತರ ಯಾವುದೇ ಕಾರಣಕ್ಕೂ ಲಾಕ್ಡೌನ್ ಅನ್ನು ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ .
ಸೋಂಕು ನಿಯಂತ್ರಣಕ್ಕೆ ಬಂದ ನಂತರವಷ್ಟೇ ಈ ಬಗ್ಗೆ ಚಿಂತಿಸಲಾಗುವುದು ಎಂದು ಅವರು ಹೇಳಿರುವ ಹಿನ್ನೆಲೆಯಲ್ಲಿ ಏಪ್ರಿಲ್ 14 ರಿಂದ ಮತ್ತೆ ಲಾಕ್ಡೌನ್ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆ ದೇಶದ ಆರ್ಥಿಕತೆ ಮೇಲಾಗಿರುವ ಪರಿಣಾಮದ ಬಗ್ಗೆ ಮೋದಿ ಅವರು ವಿವರಿಸಿದ್ದು, ಈ ವೇಳೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೂಡ ಎಲ್ಲಾ ನಾಯಕರಿಗೆ ತಿಳಿಸಿದ್ದಾರೆ.
ಲಾಕ್‍ಡೌನ್ ಸಂದರ್ಭದಲ್ಲಿ ಜನರ ನೆರವಿಗೆ ಸರ್ಕಾರ ಘೋಷಿಸಿರುವ ಪ್ಯಾಕೇಜ್, ಸಹಾಯದ ಬಗ್ಗೆ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ. ಇದಲ್ಲದೇ ಲಾಕ್‍ಡೌನ್ ಮುಂದುವರಿದರೆ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಪಿಪಿಇ ಕಿಟ್‍ಗಳು, ಮಾಸ್ಕ್, ಹ್ಯಾಂಡ್ ಗ್ಲೋಸ್ ಹಾಗೂ ವೆಂಟಿಲೇಟರ್ ಗಳನ್ನು ಪೂರೈಕೆ ಮಾಡುವಂತೆ ನಾಯಕರು ಮನವಿ ಮಾಡಿದ್ದು, ಇದಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಮೋದಿ ಅವರು ನೀಡಿದ್ದಾರೆ.